ನವದೆಹಲಿ, ಸೆ 27 (MSP): ಅಯೋಧ್ಯೆ ವಿಚಾರಕ್ಕೆ ಸಂಬಂಧಪಟ್ಟಂತೆ ತೀರ್ಪು ನೀಡಿದ ಸುಪ್ರೀಂಕೋರ್ಟ್ 1994 ರಲ್ಲಿ ನೀಡಿದ ತೀರ್ಪನ್ನೇ ಎತ್ತಿ ಹಿಡಿದಿದೆ. ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎನ್ನುವ ಅಭಿಪ್ರಾಯವನ್ನೇ ಹೊರಹಾಕಿದೆ.
1994ರಲ್ಲಿ 'ಮಸೀದಿಗಳಲ್ಲಿ ನಮಾಜ್ ಮಾಡುವುದು ಇಸ್ಲಾಂನ ಅವಿಭಾಜ್ಯ ಭಾಗವಲ್ಲ' ಎಂದಿದ್ದ ಇಸ್ಮಾಯಿಲ್ ಫಾರೂಕಿ ತೀರ್ಪಿನ ಪರಿಶೀಲನೆ ಸಂಬಂಧ ಸೆ.27 ರಂದು ಮಹತ್ವದ ತೀರ್ಪು ಪ್ರಕಟಿಸಿರುವ ಮುಖ್ಯ ನ್ಯಾ. ದೀಪಕ್ ಮಿಶ್ರ, ಅಶೋಕ್ ಭೂಷನ್, ನ್ಯಾ. ನಜೀರ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನ್ಯಾ.ಅಶೋಕ್ ಭೂಷಣ್ ಹಾಗೂ ನ್ಯಾ. ದೀಪಕ್ ಮಿಶ್ರಾ ಅವರು ಮಾತ್ರ ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, 1994 ರ ಫಾರೂಕಿ ಪ್ರಕರಣದ ತೀರ್ಪನ್ನೇ ಎತ್ತಿ ಹಿಡಿದ್ದಾರೆ. ಅದರೆ ಇದಕ್ಕೆ ನ್ಯಾ.ನಜೀರ್ ಸಮ್ಮತಿ ವ್ಯಕ್ತಪಡಿಸಿಲ್ಲ.
ಈ ತೀರ್ಪಿನೊಂದಿಗೆ ವಿಸ್ತ್ರತ ಪೀಠಕ್ಕೆ ಈ ಕೇಸ್ ನ ವರ್ಗಾವಣೆ ಮಾಡುವುದಿಲ್ಲ ಎಂದು 2:1 ಬಹುಮತದ ಪೀಠ ಸ್ಪಷ್ಟಪಡಿಸಿದೆ. ಇದೇ ವೇಳೆ ಯಾವುದೇ ಧರ್ಮದ ಸ್ಥಳಗಳನ್ನು ಸರ್ಕಾರಗಳು ವಶಕ್ಕೆ ಪಡೆಯಬಹುದು ಎಂಬುದನ್ನೂ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳು ಹೇಳಿದ್ದಾರೆ. ಇದಕ್ಕೆ ವಿರುದ್ದವಾಗಿ ಫಾರೂಕಿ ಪ್ರಕರಣದ ತೀರ್ಪನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಬೇಕೆಂದು ನ್ಯಾ.ನಜೀರ್ ಅಭಿಪ್ರಾಯಪಟ್ಟಿದ್ದು, ತೀರ್ಪಿನ ಸಂಬಂಧ ಇನ್ನಿಬ್ಬರು ಸಹೋದ್ಯೋಗಿ ನ್ಯಾಯಮೂರ್ತಿಗಳ ಅಭಿಪ್ರಾಯಕ್ಕೆ ನನ್ನ ಸಹಮತ ಇಲ್ಲ, ಮಸೀದಿ ಇಸ್ಲಾಂ ನ ಅವಿಭಾಜ್ಯ ಅಂಗವೇ ಎಂಬ ವಿಷಯವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಬೇಕು ಎಂದು ಹೇಳಿದ್ದಾರೆ.