ಮಂಗಳೂರು,ಸೆ 27 (MSP): ಈ ಬಾರಿಯ ದಸರಾ ರಜೆಯಲ್ಲಿ ಯಾವುದೇ ಕಡಿತವಿಲ್ಲ. ರಾಜ್ಯಾದ್ಯಂತ ಇತರ ಶಾಲಾ ಮಕ್ಕಳಿಗೆ ಇರುವಂತೆ ಕರಾವಳಿಯ ಮಕ್ಕಳಿಗೂ ರಜೆ ಇರಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಸಿಇಒ, ಡಿಡಿಪಿಐ ಜೊತೆ ಚರ್ಚೆ ನಡೆಸಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಸೆ.27 ರ ಗುರುವಾರ ಮಾತನಾಡಿದ ಅವರು, ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ನೀಡುವಂತೆ ಅಕ್ಟೋಬರ್ 7 ರಿಂದ 21 ರ ವರಗೆ ನಿಗದಿಗೊಳಿಸಿದ ರಜೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಿಗೂ ನೀಡಲಾಗುವುದು. ನವರಾತ್ರಿ ರಜೆಯಲ್ಲಿ ಯಾವುದೇ ಕಡಿತ ಇಲ್ಲ ಎಂದು ಸ್ಪಷ್ಟಪಡಿಸಿದರು.
ವಿಪರೀತ ಮಳೆಯ ಕಾರಣದಿಂದ ಒಟ್ಟಾರೆ ೯ ದಿನಗಳ ಕಾಲ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ಬಳಿಕ ಈ ರಜೆಯನ್ನು ನವರಾತ್ರಿ ರಜೆಯಲ್ಲಿ ಕಡಿತಗೊಳಿಸಿ ಜಿಲ್ಲೆಯ ಮಕ್ಕಳಿಗೆ ಅ. ೧೪ ರಿಂದ ೨೧ ರವರೆಗೆ ರಜೆಯನ್ನು ಘೋಷಿಸಿ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿತ್ತು. ಆದರೆ ವಿಶ್ವಹಿಂದೂ ಪರಿಷದ್, ಬಜರಂಗದಳ, ಹಾಗೂ ಇತರ ಸಂಘಟನೆಗಳು, ರಾಜ್ಯ ಸರಕಾರ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದ್ದು ಕ್ರಿಸ್ ಮಸ್ ಗಿಲ್ಲದ ರಜೆ ಕಡಿತ ಮತ್ತು ದಸರಾ ರಜೆಗೆ ಮಾತ್ರ ಅನ್ವಯ ಯಾಕೆ ಎಂದು ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿತ್ತು.