ಉಡುಪಿ, ಮೇ.12 (DaijiworldNews/PY): "ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮ ವಹಿಸಬೇಕು" ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹವಾಮಾನ ಇಲಾಖೆಯ ವರದಿಯಂತೆ, "ಮೇ 14 ರಿಂದ 16ರವರೆಗೆ ಮೂರು ದಿನಗಳ ಅವಧಿಯಲ್ಲಿಅರಬ್ಬಿ ಸಮುದ್ರದಲ್ಲಿಉಂಟಾದ ವಾಯುಭಾರ ಕುಸಿತದಿಂದ ಹೆಚ್ಚಿನ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮ ವಹಿಸಬೇಕು" ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಜಿಲ್ಲಾಅಥವಾ ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜನೆಗೊಂಡ ನೋಡೆಲ್ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಕೋಪವನ್ನು ನಿಭಾಯಿಸಲು ತಯಾರಿ ಮಾಡಿಕೊಳ್ಳಬೇಕು. ಮೀನುಗಾರರು ನದಿ, ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ ಅಥವಾ ಕೆಳಗೆ ನಿಲ್ಲದೇ ಸುರಕ್ಷಿತ ಸ್ಥಳಗಳನ್ನು ತಲುಪಬೇಕು" ಎಂದಿದ್ದಾರೆ.
ತುರ್ತು ಸೇವೆಗಾಗಿ 1077 ಅಥವಾದೂರವಾಣಿ ಸಂಖ್ಯೆ: 0820-2574802 ಅನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.