ನವದೆಹಲಿ, ಸೆ 27 (MSP): ಮುಸ್ಲಿಂರ ಪ್ರಾರ್ಥನೆಗೆ ಮಸೀದಿ ಅಗತ್ಯವೋ ಆಥವಾ ಇಲ್ಲವೋ ಎನ್ನುವ ಕುರಿತಾಗಿ ಸುಪ್ರೀಂ ಕೋರ್ಟ್ ಇಂದು ಮಹತ್ತರ ತೀರ್ಪನ್ನು ನೀಡಲಿದೆ. ಇಂದಿನ ತೀರ್ಪಿನಿಂದ ದೇಶದ ನಾಗರಿಕರ ಮೇಲೆ ಸಹಜವಾಗಿಯೇ ಪರಿಣಾಮ ಬೀರಲಿದೆ.
ಮಸೀದಿಯಲ್ಲಿಯೇ ಪ್ರಾರ್ಥನೆ ಮಾಡುವುದು ಇಸ್ಲಾಂನಲ್ಲಿ ಅಗತ್ಯವೇ ಎಂಬ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇದು ರಾಮಜನ್ಮಭೂಮಿ - ಬಾಬ್ರಿ ಮಸೀದಿ ಪ್ರಕರಣಕ್ಕೆ ಒಳಪಟ್ಟಿದ್ದು, ಈ ಅಂಶದ ಅಂತಿಮ ನಿರ್ಧಾರವು ರಾಮಜನ್ಮಭೂಮಿ ಪ್ರಕರಣದ ತೀರ್ಪಿನ ಮೇಲೆ ಪರಿಣಾಮ ಬೀರಬಹುದಾಗಿದೆ. ಸದ್ಯ ಸಿಜೆಐ ದೀಪಕ್ ಮಿಶ್ರಾ, ನ್ಯಾ, ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ಒಳಗೊಂಡ ಮೂವರು ನ್ಯಾಯಮೂರ್ತಿಗಳಿರುವ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. 1994 ರಲ್ಲಿ ಪ್ರಕರಣವೊಂದರಲ್ಲಿ ನೀಡಿದ ತೀರ್ಪಿನ ಪ್ರಕಾರ ಇಸ್ಲಾಂ ಧರ್ಮವನ್ನು ಅನುಸರಿಸಲು ಮಸೀದಿ ಪ್ರಮುಖ ಭಾಗವಲ್ಲ ಪ್ರಾರ್ಥನೆಯನ್ನು ಎಲ್ಲಾದರೂ ಮಾಡಬಹುದು ಎಂದಿತ್ತು.
ಇಂದಿನ ತೀರ್ಪು ಅಯೋಧ್ಯಾ ಪ್ರಕರಣಕ್ಕೆ ಸಂಬಂಧಪಟ್ಟಿದ್ದರಿಂದ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. 1994ರ ಸುಪ್ರೀಂ ತೀರ್ಪನ್ನು ಪ್ರಶ್ನಿಸಿ ಹಲವು ಮುಸ್ಲಿಂ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು. ಇನ್ನು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿರುವ ದೀಪಕ್ ಮಿಶ್ರಾ ನಿವೃತ್ತಿಯಾಗಲಿದ್ದು ಅವರು ನೀಡುವ ಕೊನೆಯ ತೀರ್ಪು ಇದಾಗಿದ್ದು, ಇದರೊಂದಿಗೆ ಅವರು ನಿವೃತ್ತಿಯಾಗಲಿದ್ದಾರೆ.