ಮಂಗಳೂರು, ಸೆ 26(SM): ಮಂಗಳೂರು ಧರ್ಮಪ್ರಾಂತ್ಯದ ಇತ್ತೀಚಿಗಷ್ಟೇ ನೂತನ ಧರ್ಮಾಧ್ಯಕ್ಷರಾಗಿ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನಾ ಅಧಿಕಾರ ಸ್ವೀಕರಿಸಿದ್ದಾರೆ. ಇದೀಗ ಧರ್ಮಪ್ರಾಂತ್ಯದ ವಿಗಾರ್ ಜನರಲ್(ಶ್ರೇಷ್ಠ ಧರ್ಮಗುರು)ಗಳಾಗಿ ವಂ. ಫಾ. ಮ್ಯಾಕ್ಸಿಮ್ ಲಾರೆನ್ಸ್ ನೊರೊನ್ಹಾ ಅಧಿಕಾರ ಸ್ವೀಕರಿಸಿದ್ದಾರೆ.
ಸೆಪ್ಟೆಂಬರ್ 26ರಂದು ಧರ್ಮಾಧ್ಯಕ್ಷರ ನಿವಾಸದಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಅವರು ವಿಗಾರ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದರು. ಫಾ. ಮ್ಯಾಕ್ಸಿಮ್, ಉಡುಪಿ ಧರ್ಮಪ್ರಾಂತ್ಯದ ಪಾಂಬೂರಿನ ಅಲ್ಬರ್ಟ್ ನೊರೊನ್ಹಾ ಹಾಗೂ ಫ್ಲೋರಿನ್ ನೊರೊನ್ಹಾ ದಂಪತಿಗಳ ಪುತ್ರ. 1989ರ ಅಕ್ಟೋಬರ್ 10ರಂದು ಅವರು ಮಂಗಳೂರು ಧರ್ಮಪ್ರಾಂತ್ಯದ ಮೂಲಕ ಧರ್ಮಗುರುಗಳ ದೀಕ್ಷೆಯನ್ನು ಪಡೆದರು.
ಬಳಿಕ ಅವರು ಬೀದರ್ ನ ಬಾಲ್ಕಿ ಹಾಗೂ ಜಲಸಂಗಿಯಲ್ಲಿ, ಪಾಂಗ್ಲಾ ಹಾಗೂ ಬೆಂದೂರು ಚರ್ಚ್ ಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಪಿಯೂಸ್ ನಗರ್ ನಲ್ಲಿ ಧರ್ಮಗುರುಗಳಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲದೆ ಫೆರಾರ್ ಚರ್ಚ್ ನ ಧರ್ಮಗುರುಗಳಾಗಿಯೂ 7 ವರ್ಷಗಳ ಅವಧಿಗೆ ಅವರು ಸೇವೆ ಸಲ್ಲಿಸಿದ್ದಾರೆ.
ಬಳಿಕ 2008ರಿಂದ 2013ರ ತನಕ ಮಂಗಳೂರು ಧರ್ಮ ಪ್ರಾಂತ್ಯದ ಹಣಕಾಸು ವಿಭಾಗದ ಆಡಳಿತಾಧಿಕಾರಿಯಾಗಿದ್ದರು. 2013ರಿಂದ ಮೊಡಂಕಾಪು ಚರ್ಚ್ ನ ಧರ್ಮಗುರುಗಳಾಗಿ ಅವರು ಸೇವೆ ಸಲ್ಲಿಸಿದ್ದಾರೆ.
ಇದೀಗ ಧರ್ಮಪ್ರಾಂತ್ಯದ ವಿಗಾರ್ ಜನರಲ್ ಆಗಿ ನೇಮಕಗೊಂಡಿದ್ದಾರೆ.