ಬೆಳ್ತಂಗಡಿ, ಸೆ 26(SM): ಚಾರ್ಮಾಡಿ ಘಾಟಿ ರಸ್ತೆಯ ೩ನೇ ತಿರುವಿನಲ್ಲಿ ಬುಧವಾರ ಮುಂಜಾನೆ ತರಕಾರಿ ಹೇರಿಕೊಂಡು ಬರುತ್ತಿದ್ದ ಲಾರಿ ಪಲ್ಟಿಯಾಗಿ ತಾಸುಗಟ್ಟಲೆ ವಾಹನ ಸಂಚಾರದಲ್ಲಿ ವ್ಯತ್ಯಯವಾಯಿತು. ಅಲ್ಲದೆ 10 ಗಂಟೆಯ ಸುಮಾರಿಗೆ ಮತ್ತೆ ಸರಕಾರಿ ಬಸ್ಸೊಂದು ಕೆಟ್ಟು ನಿಂತು ಮತ್ತೆ ವಾಹನ ಸಂಚಾರದಲ್ಲಿ ವ್ಯತ್ಯ ಉಂಟಾಗಿದೆ.
ಕಳೆದ ೧ ತಿಂಗಳ ಹಿಂದೆ ಸುರಿದ ನಿರಂತರ ಮಳೆಯಿಂದಾಗಿ ಪ್ರಮುಖ ಘಾಟ್ ಗಳು ಬಂದ್ ಆಗಿ ವಾಹನ ಸಂಚಾರ ಸಂಪೂರ್ಣ ವ್ಯತ್ಯಯವಾಗಿದೆ. ಬಹುತೇಕ ವಾಹನಗಳು ಚಾರ್ಮಾಡಿ ಮೂಲಕವೇ ಆಗಮಿಸುತ್ತಿದ್ದು, ಪ್ರತಿನಿತ್ಯ ವಾಹನ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ.
ಕೊಟ್ಟಿಗೆಹಾರ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಲಾರಿ ಮೂರನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಶಿರಾಡಿ ಘಾಟಿ ರಸ್ತೆ ಘನ ವಾಹನಗಳಿಗೆ ನಿರ್ಬಂಧ ಇರುವುದರಿಂದ ಸರಕಾರಿ, ಖಾಸಗಿ ಬಸ್ ಗಳು, ಜಿಲ್ಲಾಡಳಿತ ನೀಡಿದ ಆದೇಶದಂತೆ ಈ ಘಾಟಿ ರಸ್ತೆಯಲ್ಲಿ ಸಂಚರಿಸಲು ಅವಕಾಶ ಇರುವ ಘನ ವಾಹನಗಳ ದಟ್ಟಣೆ ಹೆಚ್ಚಿದ್ದು ಲಾರಿ ಪಲ್ಟಿಯಾಗಿದ್ದರಿಂದ ಮುಕ್ತ ಸಂಚಾರಕ್ಕೆತಡೆಯಾಯಿತು. ಪರಿಣಾಮವಾಗಿ ಬೆಳಗ್ಗಿನ ಜಾವ ಬೆಂಗಳೂರಿನಿಂದ ಮಂಗಳೂರು, ಧರ್ಮಸ್ಥಳ, ಉಡುಪಿ, ಮುಂತಾದಕಡೆಗೆ ಬರುತ್ತಿದ್ದ ಖಾಸಗಿ ಹಾಗೂ ಸರಕಾರಿ ಬಸ್ ಗಳು ಘಾಟಿಯಲ್ಲಿ ಬ್ಲಾಕ್ ಆಗಿದ್ದವು. ಇದರಿಂದ ಘಾಟಿಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಸ್ಥಳೀಯರ ಹಾಗೂ ಸಂಚಾರಿ ಪೋಲಿಸರ ಸಹಕಾರದಿಂದ ಉರುಳಿದ ವಾಹನವನ್ನು ತೆರವುಗೊಳಿಸಿದ ಬಳಿಕ ಘಾಟಿಯಲ್ಲಿ ಟ್ರಾಫಿಕ್ ಜಾಮ್ ನಿಂದ ಸಾಲುಗಟ್ಟಿ ನಿಂತಿದ್ದ ವಾಹನಗಳು ನಿಧಾನಗತಿಯಲ್ಲಿ ಬಿಡಲಾಯಿತು.
ಲಾರಿಯನ್ನು ತೆರವುಗೊಳಿಸಿದ ಬಳಿಕ ಮತ್ತೆ ಸರಕಾರಿ ಬಸ್ಸೊಂದು ಕೆಟ್ಟು ನಿಂತಿದೆ. ಇದರಿಂದ ಪುನಾ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು. ದ.ಕ. ಜಿಲ್ಲೆಯನ್ನು ಸಂಪರ್ಕಿಸುವ ಬೇರೆ ಘಾಟಿ ರಸ್ತೆಗಳ ನಿರ್ಬಂಧಗಳಿಂದಾಗಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಆಗಾಗ ವಾಹನ ಸಂಚಾರದಲ್ಲಿ ತಡೆಯಾಗುತ್ತಿದೆ. ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಘಾಟಿರಸ್ತೆಯಲ್ಲಿ ಹೊಂಡಗಳು ಸೃಷ್ಟಿ ಯಾಗಿದ್ದು ತಿರುವುಗಳಲ್ಲಿ ವಾಹನಗಳು ಪಲ್ಟಿಯಾಗಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರು ತಾಸುಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ.
ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ.