ಸುಬ್ರಹ್ಮಣ್ಯ, ಸೆ 26(SM): ಮನೆ, ಆಸ್ಪತ್ರೆ, ಆಂಬುಲೆನ್ಸ್ ಗಳಲ್ಲಿ ಮಕ್ಕಳಿಗೆ ಜನ್ಮ ನೀಡಿರುವ ಪ್ರಸಂಗ ನಮಗೆ ತಿಳಿದಿದೆ. ಆದರೆ, ಇಲ್ಲೊಬ್ಬರು ಗರ್ಭಿಣಿ ಸರಕಾರಿ ಬಸ್ ನಿಲ್ದಾಣದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದ ಸರಕಾರಿ ಬಸ್ ನಿಲ್ದಾಣದ ಶೌಚಾಲಯದಲ್ಲಿ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆ. ಚಿಕ್ಕಮಗಳೂರು ನಿವಾಸಿ ತುಂಬು ಗರ್ಭಿಣಿ ಆಶಾ ಕುಕ್ಕೆ ಸುಬ್ರಹ್ಮಣ್ಯ ದೇವರ ದರುಷನಕ್ಕೆ ಒಬ್ಬಂಟಿಯಾಗಿ ಆಗಮಿಸಿದ್ದರು. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲೆಂದು ತೆರಳಿದ್ದಾರೆ. ಈ ಸಂದರ್ಭ ಈಕೆ ಅಲ್ಲೆ ಬಸ್ ನಿಲ್ದಾಣದಲ್ಲಿದ್ದ ಶೌಚಾಲಯಕ್ಕೆ ತೆರಳಿದ್ದಾರೆ. ಶೌಚಾಲ್ಯಕ್ಕೆ ತೆರಳಿದ ಮಹಿಳೆ ಕ್ಷಣಾರ್ಧದಲ್ಲೇ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.
ತಕ್ಷಣ ಈ ವಿಚಾರ, ಸ್ಥಳೀಯರಿಗೆ ರವಾನೆಯಾಗಿದೆ. ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಮೂಲಕ ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ರವಾನೆ ಮಾಡಲಾಯಿತು. ಇದೀಗ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.