ಪುತ್ತೂರು, ಸೆ 26(SM): ಇಲ್ಲಿನ ನರಿಮೊಗರು ಸರಕಾರಿ ಹಿಂದುಳಿದ ವರ್ಗಗಳ ಹಾಸ್ಟೇಲ್ ನಲ್ಲಿ ನಡೆದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿದ್ಯಾರ್ಥಿನಿಯ ಆತ್ಮಹತ್ಯೆಯ ಸುತ್ತ ಹಲವು ಸಂಶಯಗಳು ಹುಟ್ಟಿಕೊಂಡಿವೆ.
ವಿದ್ಯಾರ್ಥಿನಿ ಜೀವಿತಾ ಸಾವಿಗೀಡಾಗಲು ಹಾಸ್ಟೇಲ್ ಹಾಗೂ ಆಕೆ ಕಲಿಯುತ್ತಿದ್ದ ಕಾಲೇಜಿನ ಪ್ರಾಂಶಪಾಲರ ಒತ್ತಡ ಕಾರಣವೇ ಎನ್ನುವ ಸಂಶಯವೂ ಇದೀಗ ಹುಟ್ಟಿಕೊಂಡಿದೆ. ಈ ನಡುವೆ ಜೀವಿತಾ ಸಾವಿನ ರಹಸ್ಯವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿ ಪುತ್ತೂರು ಕೊಂಬೆಟ್ಟು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.
ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಜೀವಿತಾಳ ಸಾವು ಕಗ್ಗಂಟಾಗಿ ಪರಿಣಮಿಸಿದೆ. ಜೀವಿತಾ ನರಿಮೊಗರಿನಲ್ಲಿರುವ ಸರಕಾರಿ ಹಿಂದುಳಿದ ವರ್ಗಗಳ ಮಹಿಳಾ ಹಾಸ್ಟೆಲ್ ನಲ್ಲಿ ಸೆಪ್ಟೆಂಬರ್ ೨೪ರ ಸೋಮವಾರದಂದು ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್ ನೋಟೊಂದನ್ನು ಬರೆದುಕೊಂಡಿರುವ ಜೀವಿತಾ ತನ್ನ ಸಾವಿಗೆ ಕಾರಣವೇನು ಎನ್ನುವುದನ್ನು ಡೆತ್ ನೋಟ್ ನಲ್ಲಿ ನಮೂದಿಸಿರುವ ಸಾಧ್ಯತೆಯಿದೆ.
ಸೋಮವಾರಪೇಟೆ ನಿವಾಸಿಯಾಗಿರುವ ಜೀವಿತಾ ಗೌರೀ ಗಣೇಶ ಹಬ್ಬಕ್ಕೆಂದು ಊರಿಗೆ ಹೋದವಳು ಹದಿನಾಲ್ಕು ದಿನಗಳ ಕಾಲ ಕಾಲೇಜಿಗೆ ಹಾಗೂ ಹಾಸ್ಟೆಲ್ ಗೆ ಬಂದಿರಲಿಲ್ಲ. ಜೀವಿತಾ ಪೋಷಕರ ಪ್ರಕಾರ ಗಣೇಶ ಚತುರ್ಥಿಯ ಮರುದಿನವೇ ಆಕೆ ಪುತ್ತೂರಿಗೆ ಹೊರಟಿದ್ದಳೆಂದು ತಿಳಿದು ಬಂದಿದೆ. ಈ ನಡುವೆ ಜೀವಿತಾ ಹಾಸ್ಟೆಲ್ ಗೂ ಹೋಗದೆ, ಕಾಲೇಜಿಗೂ ತೆರಳದೆ ಎಲ್ಲಿಗೆ ಹೋಗಿದ್ದಳು ಎನ್ನುವ ಬಗ್ಗೆ ಸ್ಪಷ್ಟನೆ ಬೇಕಾಗಿದೆ. ಅಲ್ಲದೆ ತನಿಖೆ ನಡೆಸುತ್ತಿರುವ ಪುತ್ತೂರು ನಗರ ಪೋಲೀಸರು ಆಕೆಯ ಡೆತ್ ನೋಟನ್ನು ಮುಚ್ಚಿಟ್ಟಿದ್ದಾರೆ ಎನ್ನುವ ಆರೋಪವನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
ಈ ನಡುವೆ ಜೀವಿತಾ ಸಾವಿನ ರಹಸ್ಯವನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿ ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸೆಪ್ಟಂಬರ್ 28 ರಂದು ಮಧ್ಯಂತರ ಪರೀಕ್ಷೆಯನ್ನು ಬಹಿಷ್ಕರಿಸಿ ಪುತ್ತೂರು ನಗರ ಪೋಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಜೀವಿತಾ ತುಂಬಾ ಚುರುಕಿನಿಂದಿರುವ ವಿದ್ಯಾರ್ಥಿನಿಯಾಗಿದ್ದು, ಯಾವುದೇ ಸಣ್ಣ ಕಾರಣಕ್ಕೂ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ ಎನ್ನುವುದು ಆಕೆಯ ಸಹಪಾಠಿಗಳ ವಿಶ್ವಾಸ. ಹಾಗಿದ್ದ ಮೇಲೆ ಕಾಲೇಜಿಗೆ ಬಂದ ತಕ್ಷಣವೇ ಆಕೆಯ ಮೇಲೆ ಯಾವ ರೀತಿಯ ಒತ್ತಡ ಹೇರಲಾಗಿತ್ತು ಎನ್ನುವ ಕುರಿತು ತನಿಖೆಯಾಗಬೇಕು ಎನ್ನುವುದು ವಿದ್ಯಾರ್ಥಿಗಳ ಆಗ್ರಹವಾಗಿದ್ದು, ತನಿಖೆಯಿಂದಲೇ ಸತ್ಯಾಸತ್ಯತೆ ಹೊರಬರಬೇಕಾಗಿದೆ.