ನವದೆಹಲಿ, ಸೆ 26 (MSP): ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಅವೇಶದಲ್ಲಿ ನಿಂದನಾತ್ಮಕ ಫೋಟೊವನ್ನು ಟ್ವೀಟ್ ಮಾಡಿದ್ದ ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅವರ ವಿರುದ್ದ ಇದೀಗ ಎಫ್ ಐ ಆರ್ ದಾಖಲಾಗಿದೆ. ರಮ್ಯಾ ತನ್ನ ಟ್ವಿಟರ್ ಖಾತೆಯಲ್ಲಿ ಮೋದಿ ಅವರು ತನ್ನ ಮೇಣದ ಪ್ರತಿಮೆ ಎದುರಿಗಿದ್ದ ಫೋಟೋ ಟ್ವೀಟ್ ಮಾಡಿ ಚೋರ್ ಪಿಎಮ್ ಚುಪ್ ಹೇ ಎಂಬ ಶೀರ್ಷಿಕೆ ಬರೆದಿದ್ದರು.
ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸಯ್ಯದ್ ರಿಜ್ವಾನ್ ಅಹಮದ್ ಎನ್ನುವವರು ಗೋಮತಿ ಠಾಣೆಗೆ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಟಿ ರಮ್ಯಾ ಪ್ರಧಾನಿ ವಿರುದ್ಧ ದ್ವೇಷ ಕಾರಿದ್ದಾರೆ, ಅಲ್ಲದೆ ಉನ್ನತ ಹುದ್ದೆಯಲ್ಲಿದ್ದವರನ್ನು ಕಳ್ಳ ಎಂದು ಜರಿದಿದ್ದಾರೆ, ಹಾಗಾಗಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಯ್ಯದ್ ರಿಜ್ವಾನ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಗೋಮತಿ ಠಾಣೆಯ ಪೊಲೀಸರು ದಿವ್ಯಸ್ಪಂದನ ಯಾನೆ ರಮ್ಯಾ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.