ಕಿರಿಕ್ ಪಾರ್ಟಿ ಸಿನಿಮಾದ ಬಳಿಕ ನಿರ್ದೇಶಕ ರಿಷಬ್ ಶೆಟ್ಟಿಗೆ ದೊಡ್ಡಮಟ್ಟಿನ ಯಶಸ್ಸು ತಂದುಕೊಟ್ಟ ಸಿನಿಮಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು. ಈ ಸಿನಿಮಾ ಗಡಿಭಾಗದ ಸಾಕಷ್ಟು ಬಾಲಪ್ರತಿಭೆಗಳನ್ನು ಪ್ರೋತ್ಸಾಹಿಸಿ ವೇದಿಕೆ ಕಲ್ಪಿಸಿಕೊಟ್ಟ ಸಿನಿಮಾ. ಇದೇ ಸಿನಿಮಾದಲ್ಲಿ ಬಾಲ ನಟನಾಗಿ ಮಿಂಚಿರುವ ಪ್ರತಿಭೆ ಅತೀಶ್ ಶೆಟ್ಟಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ‘ಮಜಾಭಾರತ’ ಖ್ಯಾತಿಯ ಅತೀಶ್ ಶೆಟ್ಟಿ ಈಗ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಅರುಣ್ ಪಾತ್ರದಲ್ಲಿ ಸಿನಿಪ್ರಿಯರ ಮನಗೆದ್ದ ತುಳುನಾಡಿನ ಹೆಮ್ಮೆಯ ಬಾಲನಟ.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ಮಜಾಭಾರತ ರಿಯಾಲಿಟೀ ಶೋನಲ್ಲಿ ಕೆಂಪೆಗೌಡ ಸಿನಿಮಾದ ಪೋಲಿಸ್ ಪಾತ್ರ, ಕಳ್ಳ, ಕತ್ತಿಗೆ ಕಿಟ್ಟಪ್ಪ, ಟಿಕೆಟ್ ಕಲೆಕ್ಟರ್, ದೆವ್ವ ಅಲ್ಲದೇ ಸಾಹಸಸಿಂಹ ವಿಷ್ಣುವರ್ಧನ್ ಗೆಟಪ್ನಲ್ಲಿ ನಟಿಸಿ ಜನರ ಮನೆಗೆದ್ದ ಪೋರ ಅತೀಶ್ ಶೆಟ್ಟಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಕಮಾಲ್ ಮೂಡಿಸಿದ್ದ ಅತೀಶ್ ಶೆಟ್ಟಿ ಮುಂಬರುವ ದಿನಗಳಲ್ಲಿ ತೆರೆ ಕಾಣಲಿರುವ ಸೂರಜ್ ಶೆಟ್ಟಿ ನಿರ್ದೇಶನದ ರಾಹುಕಾಲ ಗುಳಿಗಕಾಲ ಸಿನಿಮಾದಲ್ಲಿಯೂ ಬಾಲನಟನಾಗಿ ಕಾಣಿಸಿಕೊಳ್ಳಲಿದ್ದಾರೆ.
ಅತೀಶ್ ಶೆಟ್ಟಿ ಮೂಲತಃ ಮಂಗಳೂರಿನ ಎಂಆರ್ಪಿಎಲ್ ಉದ್ಯೋಗಿ ಕೊಂದಾಣ ಪಾಲ್ದಾಡಿಗುತ್ತು ಸತೀಶ್ ಶೆಟ್ಟಿ ಮತ್ತು ಉಪನ್ಯಾಸಕಿ ಭಾರತಿ ಶೆಟ್ಟಿಯವರ ಪುತ. ವಯಸ್ಸು ಕೇವಲ 8 ವರ್ಷ. ಆದರೆ ಪ್ರತಿಭೆ ವಯಸ್ಸನ್ನು ಮೀರಿಸುವಂತಹದು. ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಬಿಜೈನಲ್ಲಿ 3 ನೇ ತರಗತಿಯಲ್ಲಿ ಓದುತ್ತಿರುವ ಅತೀಶ್ ಶೆಟ್ಟಿ ನಟನೆಯಲ್ಲಿ ಎತ್ತಿದ ಕೈ. ಯಾವುದೇ ಪಾತ್ರವನ್ನು ಸಲೀಸಾಗಿ ನಿಭಾಯಿಸುವ ಇವನ ಅಭಿನಯಕ್ಕೆ ಮನಸೋಲದವರಿಲ್ಲ.
‘ನುಗ್ಗೆ ಕಾಯಿ’ ಸಿನಿಮಾದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಬಾಲನಟನಾಗಿ ಎಂಟ್ರಿಕೊಟ್ಟ ಅತೀಶ್ ಶೆಟ್ಟಿಗೆ ನಟನೆಯ ಜೊತಗೆ ಸಂಗೀತದಲ್ಲೂ ಅತೀವ ಒಲವು. ಈ ಪ್ರತಿಭೆಯ ಎಲ್ಲ ಕ್ಷೇತ್ರದಲ್ಲೂ ಮಾರ್ಗದರ್ಶಕಿ ತಾಯಿ ಭಾರತಿ ಶೆಟ್ಟಿ. ಅರಳು ಹುರಿದಂತೆ ಮಾತನಾಡಬಲ್ಲ ಈತನಿಗೆ ಪವರ್ಸ್ಟಾರ್ ಪುನೀತ್ರಾಜ್ ಕುಮಾರ್ರಂತೆ ನಟಿಸಬೇಕೆಂಬ ಆಸೆ. ಜೊತೆಗೆ ಪೊಲೀಸ್ ವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕೆಂಬ ಬಯಕೆಯೂ ಈ ಪ್ರತಿಭೆಗಿದೆ.
ಕರಾಟೆಯಲ್ಲೂ ಎತ್ತಿದ್ದ ಕೈ...
ಎಲ್ಕೆಜಿಯಲ್ಲಿರುವಾಗಲೇ ಕರಾಟೆ ತರಬೇತಿ ಪಡೆದಿರುವ ಅತೀಶ್ ಶೆಟ್ಟಿ ಕರಾಟೆಯಲ್ಲೂ ಸೈ ಎನಿಸಿಕೊಂಡಿದ್ದಾನೆ. ಸೆನ್ಸಾಯಿ ನಿತಿನ್ ಸುವರ್ಣ ಹಾಗೂ ಸಂಪತ್ ಕುಮಾರ್ರಿಂದ ಕರಾಟೆ ತರಬೇತಿ ಪಡೆದುಕೊಂಡಿರುವ ಈತನಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಸಿಕ್ಕಿವೆ. ಕೇರಳದ ಪಾಲಾಕಾಡ್ನಲ್ಲಿ ಹಾಗೂ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಹಾಗೂ ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ದೆ ಒಳಗೊಂಡಂತೆ ಗೋವಾದಲ್ಲಿ ನಡೆದ ಅಂತರ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದಪದಕವನ್ನು ತನ್ನ ಮುಡಿಗೇರಿಸಿಕೊಂಡಿದ್ದಾನೆ.
ಕ್ರೀಡಾ ಕ್ಷೇತ್ರದಲ್ಲೂ ಆಸಕ್ತಿ
ಕಲಾಕ್ಷೇತ್ರ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರದಲ್ಲೂ ಅತೀಶ್ ಶೆಟ್ಟಿ ಮುಂದು. ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದಾನೆ. ಟೇಬಲ್ ಟೆನ್ನಿಸ್, ಸ್ವಿಮ್ಮಿಂಗ್, ಸ್ಕೇಟಿಂಗ್ ಹೀಗೆ ಇನ್ನಿತರ ಆಟಗಳಲ್ಲಿಯೂ ಭಾಗವಹಿಸುವ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ಮಹತ್ತರ ಹೆಜ್ಜೆ ಇಡುವುದಕ್ಕೆ ಅತೀಶ್ ಶೆಟ್ಟಿ ಮುಂದಾಗಿದ್ದಾನೆ.
ಈತನ ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಸಾಧನೆಯನ್ನು ಗುರುತಿಸಿ ಜ್ಞಾನ ಮಂದಾರ ಅಕಾಡೆಮಿ ‘ಕರ್ನಾಟಕ ಚೇತನ’ ಹಾಗೂ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಚಿಕ್ಕಂದಿನಿಂದಲೇ ಕೃಷ್ಣವೇಷ ಸ್ಪಧೆ, ಸಂಗೀತ, ಚಿತ್ರಕಲೆ, ನೃತ್ಯ, ಏಕಪಾತ್ರಭಿನಯ, ನಾಟಕ , ಯಕ್ಷಗಾನ ಮುಂತಾದ ಕ್ಷೇತ್ರಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಮಂಗಳೂರಿನ ‘ಕೆ ಸ್ಟಾರ್’ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ‘ಜೂನಿಯರ್ ಡ್ರಾಮಾ ಪಂಟರ್ಸ್’ನಲ್ಲಿ ಪಾಲ್ಗೊಂಡು ‘ಬೆಸ್ಟ್ ಫರ್ಫಮರ್ ಆಫ್ ದಿ ವೀಕ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ. ಚಿಕ್ಕವಯಸ್ಸಿನಲ್ಲಿಯೇ ಸಾಧನೆಯ ಶಿಖರವೇರಲು ಸಜ್ಜಾಗಿರುವ ಈತನ ಸಾಧನೆಯನ್ನು ಮೆಚ್ಚುವಂತದ್ದೇ...
ನಮಿತಾ ಚಾರ್ಮತ