ಹೈದರಾಬಾದ್, ಸೆ 26 (MSP): ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಶೀಘ್ರದಲ್ಲೇ ಸತಿಪತಿಗಳಾಗಲಿದ್ದಾರೆ. ಭಾರತದ ಈ ಇಬ್ಬರು ಶ್ರೇಷ್ಟ ಆಟಗಾರರ ನಡುವಿನ 10 ವರ್ಷಗಳ ಪ್ರೀತಿಗೆ ವಿವಾಹದ ಮುದ್ರೆ ಬೀಳುವ ದಿನ ಹತ್ತಿರವಾಗತೊಡಗಿದೆ. ಕ್ರೀಡಾ ತಾರೆಗಳು ಡಿಸೆಂಬರ್ 16ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಮದುವೆಯಾಗಬೇಕು ಎನ್ನುವ ಬೇಡಿಕೆ ಈ ಹಿಂದೆಯೇ ಅಭಿಮಾನಿಗಳ ಕಡೆಯಿಂದ ಬಂದಿತ್ತು ಎನ್ನುವುದು ವಿಶೇಷ.
ಕಳೆದ ವರ್ಷ ಪರುಪಳ್ಳಿ ಕಶ್ಯಪ್ ಅವರ ಹುಟ್ಟುಹಬ್ಬಕ್ಕೆ ಸೈನಾ ನೆಹ್ವಾಲ್ , ಕಶ್ಯಪ್ ಜೊತೆಗೆ ಇರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಅತಿ ಹೆಚ್ಚು ಟ್ರೋಲ್ ಆಗಿ, ಅಭಿಮಾನಿಗಳು ಈ ಜೋಡಿಗೆ ಮೆಚ್ಚುಗೆಯನ್ನು ಸೂಚಿಸಿದ್ದರು, ಇಬ್ಬರು ಅದ್ಭುತ ಜೋಡಿಗಳಾಗಿ ಕಾಣುತ್ತಿದ್ದು, ಮದುವೆ ಆಗುವಂತೆ ಒತ್ತಾಯಿಸಿ ಹಲವಾರು ಅಭಿಮಾನಿಗಳು ಕಮೆಂಟ್ ಮಾಡಿದ್ದರು. ನೀವು ವಿಶ್ವದ ಅತ್ಯುತ್ತಮ ಜೋಡಿ ಎಂದು, ಇಬ್ಬರು ಉತ್ತಮ ದಂಪತಿಯಾಗುವ ಲಕ್ಷಣವನ್ನು ಹೊಂದಿದ್ದೀರಿ. ಮುದ್ದಾದ ಜೋಡಿಯಾಗಿ ಕಾಣುತ್ತಿದ್ದೀರಿ ಎಂದು ಬರೆದಿದ್ದರು.
28 ವರ್ಷದ ಸೈನಾ ಹಾಗೂ 32 ವರ್ಷದ ಕಶ್ಯಪ್, ಬ್ಯಾಡ್ಮಿಂಟನ್ನ ಸೂಪರ್ ಜೋಡಿಗಳಾಗಿದ್ದು, ಇವರಿಬ್ಬರು ತಮ್ಮ ಪ್ರೀತಿಯ ರಹಸ್ಯವನ್ನು 10 ವರ್ಷಗಳಿಂದ ಬಚ್ಚಿಟ್ಟುಕೊಂಡು ಬಂದಿದ್ದರು. ತಮ್ಮ ವೃತ್ತಿ ಜೀವನದ ಗುರಿಯನ್ನು ಸಾಧಿಸುತ್ತಲೇ ಬಂದಿದ್ದರು. ಇನ್ನು ಇವರ ವಿವಾಹ ತೀರಾ ಖಾಸಗಿ ಕಾರ್ಯಕ್ರಮವಾಗಿರಲಿದ್ದು ಕೇವಲ 100 ಮಂದಿಗಷ್ಟೇ ಸೀಮಿತವಾಗಲಿದೆ ಎಂದು ತಿಳಿದು ಬಂದಿದೆ. ಆದರೆ ಡಿಸೆಂಬರ್ 21ರಂದು ವೈಭವದ ರಿಸೆಪ್ಷನ್ ನಡೆಯಲಿದ್ದು, ಇಲ್ಲಿ ಎಲ್ಲ ಗಣ್ಯರಿಗೂ ಆಹ್ವಾನ ನೀಡಲಾಗುವುದು ಎಂಬ ಮಾಹಿತಿ ಹೊರಬಿದ್ದಿದೆ.