ಮಂಗಳೂರು, ಸೆ 25(SM): ಮಂಗಳೂರಿನಲ್ಲಿ ರಾಜ್ಯ ಸರಕಾರದ ವತಿಯಿಂದ ಓಡಾಡುತ್ತಿರುವ ನಾಲ್ಕು ಆಂಬುಲೆನ್ಸ್ಗಳು ಇದೀಗ ನಿರ್ವಹಣೆ ಕೊರತೆಯಿಂದ ಹಾಗೂ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳವೂ ಆಗದೇ ಸಂದಿಗ್ಥ ಸ್ಥಿತಿಯಲ್ಲಿ ಮುಂದುವರಿಯುವಂತಾಗಿದೆ.
ಮಂಗಳೂರಿನಲ್ಲಿರುವ ‘108’ಆಂಬ್ಯುಲೆನ್ಸ್ ನಲ್ಲಿ ನಾಲ್ವರು ಚಾಲಕರು ಮತ್ತು ನಾಲ್ವರು ವೈದ್ಯಕೀಯ ಪರಿಣಿತ ಸಿಬ್ಬಂದಿಗಳಿದ್ದಾರೆ. ಕಳೆದ 4 ತಿಂಗಳಿನಿಂದ ಇವರಿಗೆ ಸಂಬಳವಾಗಿಲ್ಲ. ಅಲ್ಲದೆ ಈ ಆಂಬುಲೆನ್ಸ್ ನಿರ್ವಹಣೆಯನ್ನು ಜಿ ವಿ ಕೆ ಕಂಪೆನಿಗೆ ನಿರ್ವಹಣೆಗಾಗಿ ನೀಡಲಾಗಿದೆ. ಆದರೆ ಸರಿಯಾಗಿ ನಿರ್ವಹಣೆ ಆಗದ ಕಾರಣ ವಾಹನ ಸರಿಯಾಗಿ ಉಪಯೋಗಕ್ಕೆ ಬರುತ್ತಿಲ್ಲ.
ಕೇವಲ ಎರಡು ವಾಹನಗಳಷ್ಟೇ ಉಪಯೋಗಕ್ಕೆ ಬರುತ್ತಿದ್ದು, ಇನ್ನೆರಡು ವಾಹನಗಳು ಹೆಚ್ಚಾಗಿ ದುರಸ್ತಿಯಲ್ಲೇ ಇರುತ್ತದೆ ಎಂದು ಖುದ್ದು ವಾಹನದ ಚಾಲಕರೇ ದೂರಿದ್ದಾರೆ. ಚಾಲನೆ ಸ್ಥಿತಿಯಲ್ಲಿರುವ ವಾಹನವನ್ನೂ 15 ದಿನಕ್ಕೊಮ್ಮೆ ದುರಸ್ತಿಗೆ ಕಳುಹಿಸಬೇಕಾಗಿದೆ.
ಇನ್ನು ಈ ಬಗ್ಗೆ ದಾಯ್ಜಿವರ್ಲ್ಡ್ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್, ಸಿಬ್ಬಂದಿಗಳಿಗೆ ಸಂಬಳ ಆಗದಿರುವ ಬಗ್ಗೆ ನನ್ನ ಗಮನಕ್ಕೆ ಯಾರೂ ತಂದಿಲ್ಲ. ಈ ಬಗ್ಗೆ ನಾನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.