ಮಂಗಳೂರು, ಸೆ 25(SM): ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಡಬ ನಿವಾಸಿಗಳಿಬ್ಬರ ಮೇಲೆ ಮಂಗಳೂರು ಕಂಕನಾಡಿ ಪೊಲೀಸರು ಮಫ್ತಿಯಲ್ಲಿ ಬಂದು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಜೋಬಿ ಹಾಗು ಶಿರಾಡಿ ವರ್ಗೀಸ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಿಕ್ಕಪ್ಪನ ಆರೋಗ್ಯ ವಿಚಾರಿಸಲೆಂದು ಬಂದಿದ್ದ ಇವರಿಬ್ಬರೂ ರಾತ್ರಿ ಊಟ ಮಾಡಲೆಂದು ಹೊರಗಡೆ ಬಂದಿದ್ದರು. ಈ ಸಂದರ್ಭ ಅಲ್ಲಿದ್ದ ಮಹಿಳೆಯೊಬ್ಬರು ಇವರಲ್ಲಿ ತನ್ನ ಮೊಬೈಲ್ ಕೊಟ್ಟು ಯಾರದೋ ನಂಬರ್ಗೆ ಕರೆ ಮಾಡಿಕೊಡುವಂತೆ ಸೂಚಿಸಿದ್ದಾರೆ.
ಮಹಿಳೆ ಕಷ್ಟದಲ್ಲಿದ್ದಾರೆಂದು ಯುವಕರು ಸ್ಪಂಧಿಸಿದ್ದು, ಆಕೆಯ ಕೈಗೆ ಮೊಬೈಲ್ ಹಿಂತಿರುಗಿಸುವಷ್ಟರಲ್ಲಿ ಪೊಲೀಸರು ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ಕುತ್ತಿಗೆಗೆ ಕೈಹಾಕಿ ಮಾಲೆಯನ್ನೂ ಕೂಡ ತುಂಡು ಮಾಡಿದ್ದಾರೆ ಎನ್ನುವ ಆರೋಪವನ್ನು ಜೋಬಿ ಮತ್ತು ವರ್ಗೀಸ್ ಮಾಡಿದ್ದಾರೆ. ಅಲ್ಲದೆ ರಾತ್ರಿ ಇಡೀ ತಮ್ಮ ಬಟ್ಟೆ ಬಿಚ್ಚಿಸಿ ಠಾಣೆಯಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಕೂಡ ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.