ಬಂಟ್ವಾಳ, ಮೇ 08 (DaijiworldNews/MB) : ''ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು, ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು, ನಿಯಮಗಳನ್ನು ಅನುಷ್ಠಾನಗೊಳಿಸಬೇಕು'' ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಕೊರೊನಾ ನಿಯಂತ್ರಣದ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದ ಅವರು ಜನರಿಗೆ ಭಯಹುಟ್ಟಿಸುವ ರೀತಿಯ ಅಪಪ್ರಚಾರಗಳಿಗೆ ಕಡಿವಾಣ ಹಾಕಬೇಕು, ಸುಳ್ಳು ಪ್ರಚಾರ ಕುರಿತು ಕಟ್ಟುನಿಟ್ಟಿನ ನಿಗಾ ವಹಿಸಿ. ಈ ಸಂದರ್ಭ ಯಾವುದೇ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸುವ ಕಾರ್ಯ ಮಾಡಬೇಕು, ಈ ಕುರಿತು ವಿಶೇಷ ತಂಡ ರಚನೆ ಮಾಡಿ ಎಂದರು. ಅಧಿಕಾರಿಗಳು ಉತ್ತಮ ಕೆಲಸ ನಿರ್ವಹಣೆ ಮಾಡಿದರು ಅಪಪ್ರಚಾರ ಮಾಡುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಿ ಎಂದು ತಹಶಿಲ್ದಾರ್ ಹಾಗೂ ಪೋಲೀಸ್ ಇಲಾಖೆಗೆ ಸೂಚಿಸಿದರು.
ವಿನಾಕಾರಣ ಹೊರಗೆ ತಿರುಗುವವರಿಗೆ ಕೇಸ್ ಬುಕ್ ಮಾಡಿ, ಬೀಟ್ ಪೊಲೀಸರು ನಿಗಾ ವಹಿಸಬೇಕು, ಹೈವೇ ಪಾಟ್ರೋಲ್ ವಾಹನ ಗಸ್ತು ಹೆಚ್ಚಿಸಿ ಎಂದು ಅವರು ಪೋಲೀಸ್ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.
ಕೊರೊನಾ ವಿರುದ್ದದ ಹೋರಾಟದಲ್ಲಿ ಯಾರು ವಿರೋಧ ಮಾಡಿದರೂ ಅಡ್ಡ ಬಂದರೂ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮಕೈಗೊಳ್ಳಿ, ಅಧಿಕಾರಿಗಳು ಮತ್ತು ಟಾಸ್ಕ್ ಫೋರ್ಸ್ ಸಮಿತಿ ಜೊತೆಯಾಗಿ ಕೆಲಸ ಮಾಡಿದರೆ ಗ್ರಾಮ ಮಟ್ಟದಲ್ಲಿ ಕೊರೊನಾ ನಿಯಂತ್ರಣ ಸಾಧಿಸಲು ಸಾಧ್ಯವಾಗಬಹುದು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಕೊರೊನಾ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳಿ, ಪೋಲೀಸರು ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಿ, ಯಾರಿಗೂ ತಲೆಕೆಡಿಸಿಕೊಳ್ಳಬೇಡಿ, ಕೊರೊನಾ ನಿಯಂತ್ರಣಕ್ಕಾಗಿ ಒಗ್ಗಟ್ಟಿನ ಮೂಲಕ ಹೋರಾಟ ಮಾಡೋಣ. ಜನರ ಸೇವೆ ಮಾಡಲು ಸಿಕ್ಕಿದ ಅವಕಾಶ ಎಂದು ತಿಳಿದು ಸಂಘಟನಾತ್ಮಕವಾಗಿ ಕೆಲಸ ಮಾಡಿ ಎಂದರು.
ಪರ್ಲಿಯಾ, ಫಾದರ್ ಮುಲ್ಲರ್ ಮತ್ತು ಸೋಮಯಾಜಿ ಆಸ್ಪತ್ರೆಗಳಲ್ಲಿ ನೋಡಲ್ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ಹೇಳಿದರು.
ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಜೊತೆಯಲ್ಲಿ ವಾಮದಪದವು ಆಸ್ಪತ್ರೆಯಲ್ಲಿಯೂ ಕೋವಿಡ್ ರೋಗಿಗಳಿಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲಾಗಿ ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಕಲ್ಲಡ್ಕ ದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗುತ್ತದೆ, ಜನ ಭಯಬೀತರಾಗುವುದು ಬೇಡ ಎಂದರು.
ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಕೊರೊನಾ ಸೋಂಕಿತರಿಗೆ 24 ಬೆಡ್ ಇದ್ದು ಅದರಲ್ಲಿ ಇನ್ನು 2 ಬೆಡ್ ವ್ಯವಸ್ಥೆ ಖಾಲಿ ಇದೆ.1345 ಮಂದಿ ಸೊಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಕಡೆ ಕೋವಿಡ್ ಕೇರ್ ಸೆಂಟರ್ ಇದೆ. ವಗ್ಗದಲ್ಲಿ ತೆರೆಯುವ ಅವಕಾಶ ಇದೆ. ವಗ್ಗದಲ್ಲಿ ಭರ್ತಿಯಾದರೆ ವಾಮದಪದವು ನಲ್ಲಿ ವ್ಯವಸ್ಥೆ ಮಾಡಲು ಅವಕಾಶ ಇದೆ ಎಂದು ಡಾ.ದೀಪಾ ಪ್ರಭು ಹೇಳಿದರು.
ವೇದಿಕೆಯಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ, ತಹಶಿಲ್ದಾರ್ ರಶ್ಮಿ. ಎಸ್. ಆರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ದೀಪಾಪ್ರಭು, ಮತ್ತು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.