ಬೆಂಗಳೂರು,ಸೆ 25 (MSP): ದುನಿಯಾ ವಿಜಯ್ ಕಷ್ಟದಲ್ಲಿರುವಾಗ ಅವರ ಮಾಜಿ ಪತ್ನಿ ವಿನಾಕರಣ ಮತ್ತಷ್ಟು ನಮ್ಮ ಕುಟುಂಬಕ್ಕೆ ತೊಂದರೆ ನೀಡಲು ಪ್ರಯತ್ನಿಸುತ್ತಿದ್ದಾರೆ. ನಾನು ಯಾವತ್ತು ನಾಗರತ್ನ ಮೇಲೆ ಕೈ ಮಾಡಿಲ್ಲ . ಇನ್ನೊಬ್ಬರ ಮೇಲೆ ಕೈ ಮಾಡುವಷ್ಟು ಕೆಟ್ಟವಳು ನಾನಲ್ಲ. ನಾನು ಹೊಡೆದಿದ್ದೇನೆ ಎಂದು ನಾಗರತ್ನ ಮಾಡಿರುವ ಆರೋಪ ಶುದ್ದ ಸುಳ್ಳು. ನಾನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ತನಿಖೆ ಬಳಿಕ ಸತ್ಯ ಎಲ್ಲರಿಗೂ ಗೊತ್ತಾಗಲಿದೆ ಎಂದು ನಟ, ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೀರ್ತಿ, ನನ್ನ ಪತಿ ವಿಜಯ್ ನೋವಿನಲ್ಲಿದ್ದಾರೆ. ಅವರನ್ನು ಜೈಲಿಂದ ಹೊರಗೆ ಬರುವಂತೆ ಮಾಡುವುದಷ್ಟೇ ನನ್ನ ಗುರಿ. ನನಗೆ ಇನ್ಯಾವುದೇ ಹೋರಾಟವಿಲ್ಲ ಎಂದಿದ್ದಾರೆ. ನಾನು ವಿಜಯ್ ಜತೆ ಅನೈತಿಕ ಸಂಬಂಧ ಹೊಂದಿದ್ದೇನೆ ಎಂದು ನಾಗರತ್ನ ಹೇಳಿದ್ದಾರೆ. ಆದ್ರೆ ಅವರ ಆರೋಪದಲ್ಲಿ ಹುರುಳಿಲ್ಲ. ಇಂಥಹ ಹೇಳಿಕೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆ ಭಗವಂತ ನೋಡಿಕೊಳ್ಳುತ್ತಾನೆ. ಈ ಬಗ್ಗೆ ನನಗೆ ಯಾವುದೇ ಕಾನೂನು ಹೋರಾಟ ಮಾಡಲಾಗಲಿ, ಮಾಧ್ಯಮದವರ ಮುಂದೆ ಬರಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.