ಮಂಗಳೂರು,ಸೆ 25 (MSP): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ಮಕ್ಕಳಿಗೆ ದಸರಾ ರಜೆ ನೀಡುವುದು ಹಿಂದಿನ ಕಾಲದಿಂದ ನಡೆದು ಬಂದ ಪದ್ದತಿಯಾಗಿದ್ದು, ಮಳೆಗಾಲದ ಪ್ರಕೃತಿ ವಿಕೋಪಕ್ಕೆ ನೀಡಿದ ರಜೆಯನ್ನು ದಸರಾ ರಜೆಯಲ್ಲಿ ಕಡಿತಗೊಳಿಸಲು ನಿರ್ಧರಿಸಿರುವ ಶಿಕ್ಷಣ ಇಲಾಖೆಯ ನಿರ್ಧಾರವನ್ನು ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ಖಂಡಿಸಿದ್ದು, ಅಕ್ಟೋಬರ್ 7 ರಿಂದ 21 ರ ವರಗೆ ನಿಗದಿಗೊಳಿಸಿದ ರಜೆಯನ್ನು ಜಿಲ್ಲೆಯ ಶಾಲಾ ಮಕ್ಕಳಿಗೆ ನೀಡಬೇಕೆಂದು ಎರಡೂ ಸಂಘಟನೆಗಳೂ ಆಗ್ರಹಿಸಿದೆ.
ನವರಾತ್ರಿಗೆ ನೀಡುವ ರಜೆಯನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದೆಂದು, ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ನೀಡುವಂತೆ ಅಕ್ಟೋಬರ್ 7 ರಿಂದ 21 ರ ವರಗೆ ನಿಗದಿಗೊಳಿಸಿದ ರಜೆಯನ್ನು ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಯವರಿಗೆ ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ಮನವಿ ಮಾಡಿತು.
ಮನವಿ ನೀಡಿದ ಬಳಿಕ ಮಾತನಾಡಿದ ವಿಶ್ವಹಿಂದೂ ಪರಿಷದ್ ಮಂಗಳೂರು ಜಿಲ್ಲಾಧ್ಯಕ್ಷರಾದ ಜಗದೀಶ್ ಶೇಣವ, ಈಗಾಗಲೇ ಕಡಿತಗೊಂಡ ಬೋಧನಾ ದಿನಗಳನ್ನು ಸರಿತೂಗಿಸಲು ಶನಿವಾರದಂದು ಹೆಚ್ಚಿನ ತರಗತಿ ನಡೆಸಲು ಇಲಾಖೆ ಸಮ್ಮತಿಸಲಿ ಎಂದು ಮನವಿ ಮಾಡಿದರು. ಕ್ರಿಸ್ಮಸ್ ಹಬ್ಬದ ರಜೆಯನ್ನು ನೀಡುವ ವಿಚಾರದಲ್ಲಿ ಆಯಾಯ ಶಾಲಾ ಕಾಲೇಜುಗಳ ವಿವೇಚನೆಗೆ ಬಿಟ್ಟ ನಿರ್ಣಯ ಎಂದು ಸರಕಾರ ಸುತ್ತೋಲೆ ಹೊರಡಿಸಿದ್ದು, ಆದರೆ ನವರಾತ್ರಿ ಹಬ್ಬದ ರಜೆಯನ್ನು ಮಾತ್ರ ಕಡಿತಗೊಳಿಸಲು ಸುತ್ತೋಲೆ ಹೊರಡಿಸಿಸುವ ಮೂಲಕ ರಾಜ್ಯ ಸರಕಾರ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ವಿಶ್ವಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ವಿಶ್ವಹಿಂದೂ ಪರಿಷದ್ ಮಂಗಳೂರು ಜಿಲ್ಲಾಧ್ಯಕ್ಷರಾದ ಜಗದೀಶ್ ಶೇಣವ, ವಿಶ್ವಹಿಂದೂ ಪರಿಷದ್ ಜಿಲ್ಲಾಕಾರ್ಯಧ್ಯಕ್ಷರಾದ ಗೋಪಾಲ್ ಕುತ್ತಾರ್,ವಿಶ್ವಹಿಂದೂ ಪರಿಷದ್ ಮಂಗಳೂರು ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ್ ಭುಜಂಗ ಕುಲಾಲ್, ಬಜರಂಗದಳ ಮಂಗಳೂರು ಜಿಲ್ಲಾ ಸಂಯೋಜಕ್ ಪ್ರವೀಣ್ ಕುತ್ತಾರ್ ಉಪಸ್ಥಿತಿ ಇದ್ದರು.