ಮಂಗಳೂರು, ಸೆ 25 (MSP): ಬೆಂಗಳೂರಿನಿಂದ ನಿಗೂಢವಾಗಿ ನಾಪತ್ತೆಯಾಗಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೇನಿ ಸಮೀಪದ ದೇವತಾನಪಟ್ಟಿ ಎಂಬಲ್ಲಿ ಭಾನುವಾರ ಪತ್ತೆಯಾದ ಬಡಗ ಉಳಿಪಾಡಿ ಗ್ರಾಮದ ಗಂಜಿಮಠ ಸಮೀಪದ ಜೆ.ಎಂ.ರಸ್ತೆಯ ನಿವಾಸಿ ಮುಹಮ್ಮದ್ ಸಮೀರ್ (35)ರ ಮೃತದೇಹವನ್ನು ವಿಶೇಷ ಆ್ಯಂಬುಲೆನ್ಸ್ನಲ್ಲಿ ಮಂಗಳವಾರ ತರಲಾಗಿದ್ದು ಬೆಳಗ್ಗೆ 8:15 ರ ಸುಮಾರಿಗೆ ಗಂಜಿಮಠ ತಲುಪಿತು.
ಮುಹಮ್ಮದ್ ಸಮೀರ್
ಮುಹಮ್ಮದ್ ಸಮೀರ್ ಪತ್ನಿ ಫಿರ್ದೌಸ್
ಸೆ.24 ರ ಸೋಮವಾರದಂದು ಮದ್ಯಾಹ್ನ ತಮಿಳುನಾಡಿದ ಕೃಷ್ಣಗಿರಿ ಜಿಲ್ಲೆಯಿಂದ ಹೊರಟ ಈ ಆ್ಯಂಬುಲೆನ್ಸ್, ಇಂದು ಮಂಗಳವಾರ ಮನೆಗೆ ತಲುಪಿದಾಗ, ಸ್ಥಳೀಯರು ಹಾಗೂ ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಸಾರ್ವಜನಿಕ ವೀಕ್ಷಣೆಯ ಬಳಿಕ ಮೃತದೇಹವನ್ನು ಗಂಜಿಮಠ ಜಾಮಿಯ ಮಸೀದಿಯ ವಠಾರದಲ್ಲಿ ದಫನ ನಡೆಸಲಾಯಿತು.
ತಮಿಳುನಾಡಿನ ದೇವತಾನಪಟ್ಟಿ ಎಂಬಲ್ಲಿ ಕೊಲೆ ನಡೆದ ರೀತಿಯಲ್ಲಿ ಮೃತದೇಹ ಪತ್ತೆಯಾದ ಕಾರಣ ಅಲ್ಲಿನ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈತನ್ಮದ್ಯೆ ಸಮೀರ್ ಅವರ ಪತ್ನಿ ಫಿರ್ದೌಸ್ ಹಾಗೂ ಆಕೆಯ ಪ್ರಿಯಕರ ಎಂದು ಹೇಳಲಾದ ಬೆಂಗಳೂರಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಕಾರ್ಕಳ ಮೂಲಕ ಆಸೀಫ್ 5 ಲಕ್ಷ ರೂಪಾಯಿ ಹಾಗೂ 60 ಪವನ್ ಚಿನ್ನದೊಂದಿಗೆ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಅನುಮನ ವ್ಯಕ್ತಪಡಿಸಿದ್ದು, ಇವರಿಬ್ಬರು ಸೇರಿ ಸಮೀರ್ ನನ್ನು ಕೊಲೆ ನಡೆಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಪ್ರಕರಣದ ತನಿಖೆಯನ್ನು ದೇವತಾನಪಟ್ಟಿ ಪೊಲೀಸರೇ ನಡೆಸಲಿದ್ದು ಅವರಿಗೆ ತನಿಖೆಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಲಾಗುವುದು ಎಂದು ಬಜ್ಪೆ ಇನ್ಸ್ ಪೆಕ್ಟರ್ ಪರಶಿವಮೂರ್ತಿ ಹೇಳಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದೇಹದಲ್ಲಿ ಗಾಯದ ಗುರುತು ಕಂಡುಬಂದಿದ್ದು, ಕೊಲೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.