ಮಂಗಳೂರು, ಸೆ 25 (MSP): ಹಿಂದೂ ಸಂಘಟನೆಯ ಮುಖಂಡ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿಯ ಮೇಲೆ ಮೂಡುಬಿದಿರೆ ಗಂಟಾಲ್ ಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ತಲವಾರು ದಾಳಿ ನಡೆದ ಬೆನ್ನಿಗೆ ಸಂಜೆ ಗುರುಪುರದ ಕೈಕಂಬದಲ್ಲಿ ಹಿಂದೂ ಸಂಘಟನೆಯ ಮುಖಂಡನೋರ್ವನ ಹತ್ಯೆಯ ಯತ್ನ ನಡೆದಿದೆ. ಸರಣಿ ಘಟನೆಗಳ ಹಿನ್ನಲೆಯಲ್ಲಿ ಮೂಡುಬಿದಿರೆ-ಮಂಗಳೂರು ಅಸುಪಾಸು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗುಬಂದೋಬಸ್ತ್ ಏರ್ಪಡಿಸಲಾಗಿದೆ. ಆದ್ರೆ ಈ ಎರಡು ಘಟನೆಯಿಂದ ಶಾಂತವಾಗಿದ್ದ ದಕ್ಷಿಣ ಕನ್ನಡದಲ್ಲಿ ಮತ್ತೆ ಶಾಂತಿ ಕದಡುವ ಲಕ್ಷಣಗಳು ಗೋಚರವಾಗುತ್ತಿದ್ದು, ಜನಸಾಮಾನ್ಯರು ಆತಂಕಿತರಾಗಿದ್ದಾರೆ.
ಈ ಎರಡು ಘಟನೆಗಳಿಗೆ ಸಂಬಂಧಪಟ್ಟಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು.ಜಿಲ್ಲೆಯ ಜನರು ಶಾಂತಿ ಕಾಪಾಡಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ, ಶಾಸಕ ಉಮಾನಾಥ್ ಕೊಟ್ಯಾನ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ವಿನಂತಿ ಮಾಡಿಕೊಂಡಿದ್ದಾರೆ.
ಅಪರಾಧಿ ಯಾರೇ ಆಗಲಿ, ಮೀನಾಮೇಷ ಎಣಿಸದೆ ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಿ, ಅಪರಾಧಿಗಳಿಗೆ ರಕ್ಷಣೆ ಕೊಡುವ ಪ್ರಯತ್ನ ಯಾರು ಮಾಡಬೇಡಿ. ಸಮಾಜದಲ್ಲಿ ಎಲ್ಲಕ್ಕಿಂತಲೂ ಮಿಗಿಲು ಕಾನೂನು. ಅಮಾನುಷ ಕೃತ್ಯಗಳನ್ನು ನಡೆಸಿದ ಸಮಾಜದ್ರೋಹಿಗಳನ್ನು ಬಂಧಿಸುವ ಕೆಲಸವಾಗಲಿ. ಈ ಬಗ್ಗೆ ನಾವೆಲ್ಲರೂ ಪೊಲೀಸ್ ಇಲಾಖೆಗೆ ಒತ್ತಡ ತಂದಿದ್ದೇವೆ. ಯುವಕರು ದುಡುಕಿ ಪೂರ್ವಗ್ರಹ ಪೀಡಿತರಾಗಿ ಕಾನೂಕು ಕೈಗೆ ತೆಗೆದುಕೊಳ್ಳಬೇಡಿ ಎಂದು ಮೂವರು ಶಾಸಕರು ಜನತೆಯಲ್ಲಿ ಮನವಿ ಮಾಡಿದ್ದಾರೆ.