ಉಡುಪಿ, ಮೇ 06 (DaijiworldNews/MS): ರಾಜ್ಯದಲ್ಲಿ ಕೊರೊನಾ ಸಾಂಕ್ರಮಿಕ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಉಡುಪಿ ಜಿಲೆಯಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಜನತಾ ಲಾಕ್ ಡೌನ್ ಪರಿಹಾರವಾಗಿರುವಂತೆ ಕಾಣುತ್ತಿಲ್ಲ. ಹೀಗಾಗಿ ಕಳೆದ ವರ್ಷದಂತೆ ಸಂಪೂರ್ಣ ಲಾಕ್ಡೌನ್ ಮಾಡಿ, ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಗುರುವಾರ ಮಾತನಾಡಿದ ಅವರು, ಕಳೆದ ಬಾರಿಯಂತೆ ಕಠಿಣವಾಗಿ ಲಾಕ್ಡೌನ್ ಕ್ರಮದ ಬಗ್ಗೆ ಯೋಚಿಸಬೇಕು, ಬೆಳಗ್ಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಬೇಕು. ಜನ ಈಗಿರುವ ಓಡಾಡಿದರೆ ಕೋವಿಡ್ ನಿಯಂತ್ರಣ ಸಾಧ್ಯವಿಲ್ಲ. ಮದುವೆ, ದೇವಸ್ಥಾನ ಕಾರ್ಯಕ್ರಮ, ಭೂತಾರಾಧನೆ ಎಲ್ಲವೂ ನಡೆಯುತ್ತಿದೆ. ಜನ ಹೆಚ್ಚು ಬೆರೆಯುವುದರಿಂದ ರೋಗ ಹರಡುತ್ತದೆ. ಮುಂಬೈ ಬೆಂಗಳೂರಿನಿಂದಲೂ ಜನ ಜಿಲ್ಲೆಗೆ ಬರುತ್ತಿದ್ದಾರೆ. ಹಳ್ಳಿಗಳಲ್ಲೂ ಕೊರೊನಾ ಹರಡಲು ಪ್ರಾರಂಭವಾಗಿದೆ.
ಹೊರ ಜಿಲ್ಲೆಗಳಿಂದ ಬಂದವರಿಗೆ ಆದ್ಯತೆ ಮೇಲೆ ಟೆಸ್ಟ್ ಮಾಡಿಸಬೇಕು. ಇವತ್ತಿಂದ ರ್ಯಾಪಿಡ್ ಟೆಸ್ಟ್ ಆರಂಭಿಸಲು ಸೂಚನೆ ನೀಡಿದ್ದೇನೆ. ಹೋಂ ಕ್ಚಾರಂಟೈನ್ ಕಡ್ಡಾಯ ಮಾಡಬೇಕು. ಜಿಲ್ಲೆಗೆ ಮಾತ್ರವಲ್ಲ ರಾಜ್ಯದಲ್ಲೂ 15 ದಿನಗಳ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಶೋಭಾ ಕರಂದ್ಲಾಜ್ ಹೇಳಿದ್ದಾರೆ.