ಮಂಗಳೂರು,ಸೆ 24 (MSP): ಕರಾವಳಿಯ ಜನರು ಕಾನೂನಿಗೆ ಜಗ್ಗಲಿಲ್ಲ ಅಂದರೂ ಧರ್ಮ ದೇವರುಗಳ ಹೆಸರೆತ್ತಿದ್ದರೆ ಮಾತ್ರ ಅತಿ ಸೂಕ್ಷ್ಮರಾಗಿ ಬಿಡ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಗ್ರಾಮಸ್ಥರು ಕಸ ಎಸೆಯುವವರ ವಿರುದ್ದವೂ ಅದೇ ಬಾಣವನ್ನು ಪ್ರಯೋಗಿಸಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಿನ್ನಿಗೋಳಿಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಹಲವಾರು ಕಸಕಡ್ಡಿಗಳಿಂದ ರಸ್ತೆ ಬದಿಯೇ ಕಸದ ಕೊಂಪೆಯಂತಾಗಿತ್ತು. ಇದನ್ನು ಮನಗಂಡ ಮಂಗಳೂರಿನ ಕೆಂಜಾರು ಗ್ರಾಮಸ್ಥರು ವರುಷದ ಹಿಂದೆ ಕಾನೂನಾತ್ಮಕ ಕ್ರಮ ಕೈಗೊಳ್ಳೋ ಬ್ಯಾನರ್ ಅಳವಡಿಸಿ ಕಸ ಎಸೆಯೋ ವಾಹನ ಸವಾರರಿಗೆ ಎಚ್ಚರಿಕೆ ರವಾನಿಸೋ ಪ್ರಯತ್ನ ಮಾಡಿದ್ದರು. ಸ್ಥಳೀಯ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು, ಅದರೂ ಇದಕ್ಕೆ ಕ್ಯಾರೇ ಎನ್ನದೇ ದಿನದಿಂದ ದಿನಕ್ಕೆ ಕಸ ಎಸೆಯುವವರ ಸಂಖ್ಯೆ ಅಧಿಕವಾಗಿಯೇ ಇತ್ತು. ಹತ್ತು ದಿನಗಳ ಹಿಂದೆ ಈ ಭಾಗದ ಗ್ರಾಮಸ್ಥರು ಭಾರತ ದೇಶಪ್ರೇಮಿಯ ಕೊಡುಗೆ ಅನ್ನೋ ಹೆಸರಿನಡಿ ಬ್ಯಾನರ್ ಅಳವಡಿಸಿದ್ದು ಕಸ ಎಸೆಯುವವರ ವಿರುದ್ದ ವಿಭಿನ್ನವಾಗಿ ಒತ್ತಡವೇರುವ ತಂತ್ರ ನಡೆಸಿದ್ದಾರೆ. ಪರಿಣಾಮ ಈ ಭಾಗದಲ್ಲಿ ಕಸ ಎಸೆಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆಯಂತೆ.
ಇಲ್ಲಿ ಮೂರು ಧರ್ಮಗಳ ದೇವರುಗಳ ಮೂಲಕ ಶಾಪ ನೀಡಲಾಗಿದೆ. ಈ ಜಾಗದಲ್ಲಿ ಕಸ ಎಸೆಯುವವರಿಗೆ ಶನಿ ಪ್ರವೇಶಿಸಿ 14 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸುತ್ತಾರೆ ಅನ್ನೋದಾಗಿ ಹಿಂದೂ ಧರ್ಮೀಯರಿಗೂ, ಮುಸ್ಲಿಮರಿಗೆ ಅಲ್ಲಾಹನು ಹಾಗೂ ಕ್ರೈಸ್ತರಿಗೆ ಯೇಸು ದೇವರು ಕಠಿಣ ಶಿಕ್ಷೆ ನೀಡುವುದಾಗಿ ಉಲ್ಲೇಖಿಸಿ ಆಯಾಯ ಧರ್ಮದ ದೇವರು ಹಾಗೂ ಸಂಕೇತಗಳನ್ನು ಬ್ಯಾನರ್ ನಲ್ಲಿ ಅಳವಡಿಸಲಾಗಿದೆ. ಇದರಿಂದ ಕಸ ಎಸೆಯಲು ಬಂದವರು ಮತ್ತೆ ಮತ್ತೆ ಆಲೋಚಿಸುವಂತಾಗಲಿ ಎಂದು ಗ್ರಾಮಸ್ಥರ ಉಪಾಯ. ಎಲ್ಲೆಂದರೆಲ್ಲಿ ಕಸ ಎಸೆಯುವವರಿಗೆ ಭಾರತ ದೇಶಪ್ರೇಮಿಯ ಕೊಡುಗೆ ಅನ್ನೋ ಹೆಸರಿನ ಬ್ಯಾನರ್ ಹಿಡಿಶಾಪ ಹಾಕಿದಂತಿದೆ. ವರ್ಷದ ಹಿಂದೆ ಇದೇ ರಸ್ತೆಯ ಬಜ್ಪೆಯಲ್ಲಿಯೂ ಕಸಕಡ್ಡಿಗಳನ್ನು ಎಸೆಯುವವರು ನಾಯಿಗಳು- ಹಂದಿಗಳು ಎನ್ನುವುದಾಗಿ ಬ್ಯಾನರ್ ಅಳವಡಿಸಿ ಗಮನಸೆಳೆದಿತ್ತು. ಇದೀಗ ಪ್ರತಿಬಾರಿ ಧರ್ಮ ದೇವರಿನ ವಿಚಾರ ಬಂದಾಗ ಸೂಕ್ಷ್ಮತೆ ಪಾಲಿಸುವ ಬುದ್ದಿವಂತರ ಜಿಲ್ಲೆಯ ಜನತೆಗೆ ಕೆಂಜಾರು ಗ್ರಾಮಸ್ಥರು ಈ ಮೂಲಕ ಟಾಂಗ್ ನೀಡಿದ್ದಾರೆ.