ಮಂಗಳೂರು, ಮೇ.04 (DaijiworldNews/HR): ಆನ್ಲೈನ್ ಮೂಲಕ ಐಪಿಎಲ್ ಕ್ರಿಕಟ್ನ ಬೆಟ್ಟಿಂಗ್ ಹಣವನ್ನು ಸಂಗ್ರಹಿಸಿ ಮೋಸದಿಂದ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದ ಆರು ಮಂದಿ ಬುಕ್ಕಿಗಳನ್ನು ಮಂಗಳೂರು ನಗರದ ಸಿ.ಸಿ.ಬಿ ಮತ್ತು ಇಕೋನಾಮಿಕ್ ಮತ್ತು ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಬಂಧಿಸಿದ ಘಟನೆ ನಡೆದಿದೆ.
ಬಂಧಿತರನ್ನು ವಿಕ್ರಂ ಕುಂಪಲ, ಧನಪಾಲ್ ಶೆಟ್ಟಿ ಕೃಣ್ಣಾಪುರ, ಕಮಲೇಶ್ ಸುರತ್ಕಲ್, ಹರೀಶ್ ಶೆಟ್ಟಿ, ಪ್ರೀತೆಶ್ ಅಲಿಯಾಸ್ ಪ್ರೀತಮ್ ಅಶೋಕ್ ನಗರ, ಅವಿನಾಶ್ ಉರ್ವ ಮಾರಿಗುಡಿ ಎಂದು ಗುರುತಿಸಲಾಗಿದೆ.
ಆರೋಪಿಗಳು ಕ್ರಿಕಟ್ನ ಬೆಟ್ಟಿಂಗ್ ಅನ್ನು ಮೊಬೈಲ್ ಆಪ್ಗಳಾದ ಸ್ಟಾರ್ ಆಪ್ ಮತ್ತು ಲೋಟಸ್ ಬುಕ್247 ಬೆಟ್ಗಳಲ್ಲಿ ಬೇರೆಯವರ ಹೆಸರಿನಲ್ಲಿ ಮಂಗಳೂರು ನಗರದ ಆಕ್ಸಿಸ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ಖಾತೆಗಳನ್ನು ತೆರೆದು ಬಳಿಕ ಅವರುಗಳ ಖಾತೆಗೆ ಬಾಜಿದಾರರಿಂದ ಆನ್ ಲೈನ್ ಮೂಲಕ ಬೆಟ್ಟಿಂಗ್ ಹಣವನ್ನು ಸಂಗ್ರಹಿಸಿ ಮೋಸದಿಂದ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.
ಈ ಪ್ರಕರಣದಲ್ಲಿ ಸುಮಾರು 20 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ ಸುಮಾರು 20 ಲಕ್ಷ ರೂ ಹಾಗೂ 3 ಲಕ್ಷ ನಗದು ಮತ್ತು ಆನ್ಲೈನ್ ಗೇಮ್ ಸಲುವಾಗಿ ಉಪಯೋಗಿಸುತ್ತಿದ್ದ 10
ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆದು ಕ್ರಮಕೈಗೊಳ್ಳಲಾಗಿದೆ.
ಮಂಗಳೂರು ನಗರದ ಉಪ-ಪೊಲೀಸ್ ಆಯುಕ್ತರಾದ ಹರಿರಾಂ ಶಂಕರ್ ಐ.ಪಿ.ಎಸ್ ಮತ್ತು ವಿನಯ ಗಾಂವಕರ್ ರವರ ನಿರ್ದೆಶನದಂತೆ ಸಿಸಿಬಿ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಮತ್ತು ಸಿಬ್ಬಂದಿ ಹಾಗೂ ಇಕೋನಾಮಿಕ್ ಮತ್ತು ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್ಐ ಸತೀಶ್ ಎಂ ಪಿ ಹಾಗೂ ಸಿಬ್ಬಂದಿಯವರು ಈ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.