ಮಂಗಳೂರು, ಮೇ 04 (DaijiworldNews/MB) : ಹಿರಿಯ ಪತ್ರಕರ್ತ ಸುರೇಂದ್ರ ಶೆಟ್ಟಿ (57) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬ್ರಹ್ಮಾವರದ ಆವರ್ಸೆ ಪಡುಮನೆಯಲ್ಲಿ ಜನಿಸಿದ ಅವರು ಅಚ್ಲಾಡಿಯಲ್ಲಿ ಬೆಳೆದಿದ್ದು ಮಂಗಳೂರು ವಿ.ವಿ. ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಳೆ ವಿದ್ಯಾರ್ಥಿಗಳ ಸಂಘ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿಯ (ಎಮ್ಎಎಎಮ್) ಸ್ಥಾಪಕ ಗೌರವಾಧ್ಯಕ್ಷರಾಗಿದ್ದ ಅವರು ಕೆಲ ಕಾಲ ಕನ್ನಡಪ್ರಭ ಪತ್ರಿಕೆಯ ಮಂಗಳೂರು ಆವೃತ್ತಿ ಮುಖ್ಯಸ್ಥರಾಗಿದ್ದರು. ಹಾಗೆಯೇ ಮುಂಗಾರು, ಸಂಯುಕ್ತ ಕರ್ನಾಟಕ, ವಾರ್ತಾ ಭಾರತಿ, ವಿಜಯಕರ್ನಾಟಕ ಪತ್ರಿಕೆಗಳಲ್ಲಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಇನ್ನು ಸುರೇಂದ್ರ ಶೆಟ್ಟಿ ನಿಧನಕ್ಕೆ ಎಮ್ಎಎಎಮ್ ಗೌರವಾಧ್ಯಕ್ಷರು, ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಪುತ್ರಿ, ಕುಟುಂಬಸ್ಥರನ್ನು ಅಗಲಿದ್ದಾರೆ.