ಮಂಗಳೂರು, ಸೆ 24 (MSP): ಹೆಣ್ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡು ಅದರ ವಿಡೀಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಕೇರಳ ನಿವಾಸಿಯಾಗಿರುವ, ನಗರದಲ್ಲಿ ವ್ಯಾಸನಗರದಲ್ಲಿ ವಾಸಿಸುತ್ತಿರುವ ೪೫ ವರ್ಷ ಪ್ರಾಯದ ಉದ್ಯಮಿ ಮೇಲೆ ಈ ಆರೋಪ ಹೊರಿಸಲಾಗಿದೆ. ಆರೋಪಿ ಹೆಸರು ಶಶಿರಾಜ್ ಎಂದು ತಿಳಿದುಬಂದಿದೆ.
ಈತ ಹೆಣ್ಮಕ್ಕಳ ಜತೆ ಸಲುಗೆ ಬೆಳೆಯಿಸಿ ಅವರನ್ನು ಅಪಾರ್ಟ್ ಮೆಂಟ್ ಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡು ಅದನ್ನು ವಿಡೀಯೋ ರೆಕಾರ್ಡಿಂಗ್ ಮಾದುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ವ್ಯಕ್ತಿಯನ್ನು ಬರ್ಕೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರು ಹೇಳುವಂತೆ ಕೆಲದಿನಗಳ ಹಿಂದೆ ಹುಡುಗಿಯೊಬ್ಬಳು ಮನೆಗೆ ಬಂದು ತನಗೆ ಇಲೆಕ್ಟಾನಿಕ್ ಚಿಪ್ ಕೊಟ್ಟು , ವ್ಯಕ್ತಿಯೊಬ್ಬ ಹೆಣ್ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾನೆ.ಆತನನ್ನು ಪೊಲೀಸರಿಗೆ ಒಪ್ಪಿಸಿ ಎಂದು ಆತನ ಮೊಬೈಲ್ ಸಂಖ್ಯೆ ನೀಡಿದ್ದಳು. ತಾನು ಆತನೊಂದಿಗೆ ಉಪಾಯದಿಂದ ಮಾತನಾಡಿ ಕರೆಸಿ ಪೊಲೀಸರಿಗೆ ಒಪ್ಪಿಸಿದ್ದೇನೆ. ಈ ವ್ಯಕ್ತಿ ಹಲವು ಹುಡುಗಿಯರನ್ನು ಲೈಂಗಿಕವಾಗಿ ಬಳಸಿ ಅದನ್ನು ಚಿತ್ರೀಕರಿಸಿದ್ದಾನೆ. ತನಗೆ ಅದರ ವಿಡೀಯೋ ಸಿಕ್ಕಿವೆ ಎಂದು ತಿಳಿಸಿದ್ದಾರೆ.
ಮೊದಲಿಗೆ ಆರೋಪಿಯನ್ನು ಕದ್ರಿ ಠಾಣೆಯಲ್ಲಿ ಇರಿಸಲಾಗಿತ್ತು. ಬಳಿಕ ಪ್ರಕರಣವನ್ನು ಬರ್ಕೆ ಠಾಣೆಗೆ ವರ್ಗಾಯಿಸಲಾಗಿದೆ. ಪ್ರಕರಣ ಸತ್ಯಾಸತ್ಯತೆ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.