ಮಂಗಳೂರು: ಸೆ 23 (MSP): ಕರಾವಳಿಯಲ್ಲಿ ಮಾತ್ರ ಶಾಲಾ ಮಕ್ಕಳ ದಸರಾ ರಜೆಯನ್ನು ಶಿಕ್ಷಣ ಇಲಾಖೆ ಕಡಿತಗೊಳಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಮಳೆಗಾಲದಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ತುರ್ತು ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಆದರೆ ಇದೀಗ ಶೈಕ್ಷಣಿಕ ದಿನಗಳನ್ನು ಸರಿದೂಗಿಸಲು ದಸರಾ ರಜೆ ಕಡಿತಗೊಳಿಸುವಂತೆ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಅಕ್ಟೋಬರ್ 7 ರಿಂದ 21 ರವರೆಗೆ ನೀಡಲಾಗುವ ರಜೆಯನ್ನು ಅಕ್ಟೋಬರ್ 14 ರಿಂದ 21 ರ ತನಕ ಸೀಮಿತಗೊಳಿಸಲಾಗಿದೆ.
ಮತ್ತೊಂದೆಡೆ ಕ್ರಿಸ್ ಮಸ್ ರಜೆಯನ್ನು ಐದು ದಿನಗಳ ಪಡೆದುಕೊಳ್ಳಲು ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡಿ ಅವರಿಗೆ ಮುಂದಿನ ಶನಿವಾರದಿಂದ ಮಧ್ಯಾಹ್ನದ ಬಳಿಕವೂ ಹೆಚ್ಚುವರಿ ತರಗತಿ ನಡೆಸಿ ಕಡಿತಗೊಂಡ ಬೋಧನಾ ಅವಧಿಯನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕ್ರಿಸ್ಮಸ್ ಹಬ್ಬ ಆಚರಿಸಲು ಈ ರೀತಿ ಅವಕಾಶ ಕೊಡುವುದಾದರೆ ನವರಾತ್ರಿ ಹಬ್ಬಕ್ಕೆ ಸೂಕ್ತವಾಗುವಂತೆ ಅ.7 ರಿಂದ 21 ರವರೆಗೆ ನೀಡಿ ಆ ರಜೆಯನ್ನು ಕೂಡಾ ಮುಂದಿನ ಶನಿವಾರಗಳಲ್ಲಿ ಹೆಚ್ಚುವರಿ ತರಗತಿ ನಡೆಸಿ ಭರ್ತಿ ಮಾಡಲು ಅವಕಾಶ ನೀಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.
ರಜೆಯ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿರುವ, ಶಾಸಕ ಡಿ.ವೇದವ್ಯಾಸ ಕಾಮತ್ ಮಂಗಳೂರಿನ ಶಾಲಾ ಮಕ್ಕಳಿಗೆ ಕೊಡುವ ದಸರಾ ರಜೆಯನ್ನು ಯಾವುದೇ ಕಾರಣಕ್ಕೂ ಕಡಿಮೆಗೊಳಿಸಬಾರದು ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ದಸರಾ ಮತ್ತು ಕ್ರಿಸ್ ಮಸ್ ರಜೆ ವಿಚಾರದಲ್ಲಿ ಶಿಕ್ಷಣ ಇಲಾಖೆ ದ್ವಂದ ನೀತಿ ಅನುಸರಿಸಿದೆ. ಇಬ್ಬಗೆಯ ನೀತಿ ಯಾಕೆ ಎಂದು ಇಲಾಖೆಯನ್ನು ಪ್ರಶ್ನಿಸಿದ್ದಾರೆ.
ಸದ್ಯ ದಕ್ಷಿಣ ಕನ್ನಡದಲ್ಲಿ ಇಲಾಖೆ ಪ್ರಕಾರ ಅ.14 ರಿಂದ 21 ರವರೆಗೆ ದಸರಾ ರಜೆ ಘೋಷಿಸಲಾಗಿದೆ. ಅದರೆ ವಾಸ್ತವವಾಗಿ ಈ ರಜೆಯಲ್ಲಿ ಬೋಧನಾ ಅವದಿ ಕಡಿತಗೊಳ್ಳುವುದು ಕೇವಲ ಮೂರುವರೆ ದಿನ ಮಾತ್ರ. ಕಾರಣ ಅ.14 ಭಾನುವಾರ, ಅ.17 ಆಯುಧ ಪೂಜೆ, ಅ.18 ವಿಜಯದಶಮಿ ಹಾಗೂ ಅ.21ಭಾನುವಾರ ಸೇರಿ 4 ದಿನ ಸರ್ಕಾರಿ ರಜೆಯೇ ಇದೆ.