ಕಾಸರಗೋಡು, ಸೆ 23(MSP):ವಿದೇಶಕ್ಕೆ ಕೊಂಡೊಯ್ಯಲು ತಂಡವೊಂದಕ್ಕೆ ಹಸ್ತಾಂತರಿಸಲು ತರಲಾಗಿದ್ದ ಲಕ್ಷಾಂತರ ರೂ . ಮೌಲ್ಯದ ಮಾರಕವಾದ ಮಾದಕ ಹ್ಯಾಶಿಶ್ ತೈಲವನ್ನು ಕಾಸರಗೋಡು ನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ಅಜಿತ್ ಕುಮಾರ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದು , ಇಬ್ಬರನ್ನು ಬಂಧಿಸಲಾಗಿದ್ದು , ಒಂದು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಚಂದ್ರಗಿರಿ ಹೊಳೆ ಚೆಮ್ನಾಡ್ ನ ಸೇತುವೆ ಕೆಳಗೆ ನಿಂತ ಆರೋಪಿಗಳು ಮಾತುಕತೆ ನಡೆಸುತ್ತಿದ್ದಾಗ ಮಾದಕ ವಸ್ತು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಯಿತು . ಬಂಧಿತರನ್ನು ನಾಯಮ್ಮರಮೂಲೆ ಚಾಲದ ಟಯರ್ ಫೈಝಲ್ ( 31) ಮತ್ತು ಕುಂಬಳೆ ಶೇಡಿಕ್ಕಾನ ದ ಮುಸ್ತಫಾ ( 23) ಎಂದು ಗುರುತಿಸಲಾಗಿದೆ.
ಕಾಸರಗೋಡು ನಗರ ಠಾಣಾ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಸೆ.22 ರ ಮಧ್ಯಾಹ್ನ ದಾಳಿ ನಡೆಸಿದ್ದು , ಚೆಮ್ನಾಡ್ ಸೇತುವೆ ಕೆಳಗಿನ ನಿರ್ಜನ ಸ್ಥಳಕ್ಕೆ ಹ್ಯಾಶಿಶ್ ತೈಲವನ್ನು ತಂಡವೊಂದಕ್ಕೆ ಹಸ್ತಾಂತರಿಸಲು ಇಬ್ಬರು ತಲುಪಿದ್ದರು. ಇದೇ ವೇಳೆ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇವರ ಬಳಿ ಇದ್ದ 450 ಹ್ಯಾಶಿಶ್ ತೈಲವನ್ನು ಪೊಲೀಸರು ವಶಪಡಿಸಿಕೊಂಡಿದ್ದು , ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು ಒಂಭತ್ತು ಲಕ್ಷ ರೂ . ಎಂದು ಪೊಲೀಸರು ತಿಳಿಸಿದ್ದಾರೆ.
ತಂಡದಲ್ಲಿ ಇನ್ನಷ್ಟು ಮಂದಿ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಫೈಝಲ್ ಈ ಹಿಂದೆ ಗಾಂಜಾ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಶಾಮೀಲಾಗಿದ್ದು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.