ಕೋಲಾರ, ಸೆ22(SS): ಬಿಜೆಪಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಹಗಲು ಕನಸು ಕಾಣುತ್ತಿದೆ. ಆದರೆ ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ಅಸ್ಥಿರ ಗೊಳಿಸುವಲ್ಲಿ ನನ್ನ ಪಾತ್ರ ಇಲ್ಲ. ಆದರೆ ಬಿಜೆಪಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಹಗಲು ಕನಸು ಕಾಣುತ್ತಿದೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸಿಎಂ ಕುಮಾರಸ್ವಾಮಿ ದಂಗೆ ವಿಚಾರವಾಗಿ ನೀಡಿದ ಹೇಳಿಕೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ್ದಾರೆ. ರಾಜ್ಯಪಾಲರಿಗೆ ದೂರು ನೀಡಿರುವುದು ರಾಜಕೀಯ ಅಷ್ಟೇ, ಅದರಲ್ಲಿ ಬೇರೆ ಉದ್ದೇಶ ಇಲ್ಲ. ಕೇಂದ್ರ ಸರ್ಕಾರವಾಗಲೀ ರಾಜ್ಯ ಸರ್ಕಾರವಾಗಲೀ ಯಾವುದೇ ಸರ್ಕಾರವಿದ್ದರೂ ಜನರಿಂದ ಆಯ್ಕೆಯಾಗಿರುವ ಸರ್ಕಾರಗಳು ಕಾನೂನು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ. 25 ರಂದು ಕಾಂಗ್ರೆಸ್ ಶಾಸಕಾಂಗ ಸಭೆಯನ್ನ ಖಾಸಗಿ ಹೋಟೆಲ್ನಲ್ಲಿ ಕರೆಯಲಾಗಿದೆ. ಇದರಲ್ಲಿ ಯಾವುದೇ ವಿಶೇಷ ಇಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಗೆದ್ದಿರುವ ಎಲ್ಲಾ ಶಾಸಕರು ನನ್ನ ಆಪ್ತರು ಅದರಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಅವರು ಯಾರೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದರು.