ಮಂಗಳೂರು, ಮೇ 1 (DaijiworldNews/MS): ಹೆಚ್ಚುತ್ತಿರುವ ಕೊರೊನಾ ಸೋಂಕಿನ ನಡುವೆ ಕೊವೀಡ್ ಪರೀಕ್ಷಾ ಫಲಿತಾಂಶ ತಡವಾಗುತ್ತಿರುವ ಹಿನ್ನಲೆಯಲ್ಲಿ ಫಲಿತಾಂಶ ಶೀಘ್ರ ಸಿಗಲೆಂದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 3ನೇ ಹೆಚ್ಚುವರಿ ಕೊವಿಡ್ ಪರೀಕ್ಷಾ ಯಂತ್ರವನ್ನು 25 ಲಕ್ಷ ರೂ. ವೆಚ್ಚದಲ್ಲಿ 3 ದಿನದೊಳಗೆ ಅಳವಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕೊವೀಡ್ ಕಡಿವಾಣ ಹಾಗೂ ಚಿಕಿತ್ಸೆ ವಿಚಾರಕ್ಕೆ ಸಂಬಂಧಿಸಿ ಅವರು ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿ, ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಮಾದರಿ ಕರ್ಫ್ಯೂನಿಂದಾಗಿ ನಗರಗಳಿಂದ ಜನರು ಹಳ್ಳಿಗಳತ್ತ ವಲಸೆ ಬರುತ್ತಿದ್ದು, ಹೀಗಾಗಿ ಸೋಂಕು ಹಳ್ಳಿ ಹಳ್ಳಿಗೂ ಹರಡುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣ ಗ್ರಾಮಗಳ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಬೇಕು. ಟಾಸ್ಕ್ ಫೋರ್ಸ್ ಸದಸ್ಯರು ಸೋಂಕು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಗ್ರಾಮ ಮಟ್ಟದಲ್ಲಿ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ದ ಕಠಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಸ್ಥಳೀಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಸಂಪರ್ಕಿತರನ್ನು ಹೋಂ ಕ್ವಾರಂ ಟೈನ್ ಮಾಡುವಂತೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಅಲ್ಲದೆ ತಾಲೂಕು ಕೇಂದ್ರದ ಕೋವಿಡ್ ಆಸ್ಪತ್ರೆಗಳಲ್ಲಿ 50 ಐಸಿಯು ಘಟಕಗಳನ್ನು ಸ್ಥಾಪಿಸಿ, ಚಿಕಿತ್ಸೆ ನೀಡಿ, ಜಿಲ್ಲಾ ಮಟ್ಟದ ಕೋವಿಡ್ ಕೇಂದ್ರಗಳಲ್ಲಿನ ಒತ್ತಡ ಕಡಿಮೆ ಮಾಡಬೇಕು ಎಂದಿದ್ದಾರೆ.
ಈ ವೇಳೆ ಶಾಸಕ ರಾಜೇಶ್ ನಾಯ್ಕ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಜಿ. ಪಂ. ಸಿಇಒ ಡಾ| ಕುಮಾರ್, ಕುಟುಂಬ ಕಲ್ಯಾಣ ಅಧಿಕಾರಿ ಕಿಶೋರ್ ಉಪಸ್ಥಿತರಿದ್ದರು.