Special Report: Harshini
ಉಡುಪಿ, ಎ.30 (DaijiworldNews/PY): ಕೊರೊನಾ ಆರಂಭ ನಂತರ ಮೈಕ್ರೊಬಯಾಲಜಿ ಪದವೀಧರರಿಗೆ ಬೇಡಿಕೆ ಹೆಚ್ಚಾಗಿದೆ. ಆಶ್ಚರ್ಯ ಅಂದರೆ ಆರ್ಟಿಪಿಸಿಆರ್ ಟೆಸ್ಟಿಂಗ್ ಲ್ಯಾಬ್ಗೆ ಅವರ ಬೇಡಿಕೆ ಇದೆ. ಎಲ್ಲೋ ಕೆಲವೇ ಕೆಲವು ಸೀಮಿತವಾಗಿದ್ದ ಈ ಕೋರ್ಸ್ ಪಡೆದುಕೊಂಡವರು ಕೊರೊನಾ ಟೆಸ್ಟ್ ಮಾಡುವಲ್ಲಿ ಅತೀ ಪ್ರಮುಖ ಪಾತ್ರ ವಹಿಸಿದ್ದು, ಮೈಕ್ರೋ ಬಯೋಲಾಜಿಸ್ಟ್ ತಮ್ಮ ಶಕ್ತಿ ಮೀರಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.
ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯು ಕೊರೊನಾ ಸೋಂಕಿತರ ಹಾಗೂ ಶಂಕಿತರ ಚಿಕಿತ್ಸೆಗಾಗಿಯೇ ಎಂಟು ಲ್ಯಾಬ್ ಟೆಕ್ನಿಶಿಯನ್, ಎಂಟು ಡಾಟಾ ಆಪರೇಟರ್ಸ್, ಒಬ್ಬರು ಗ್ರೂಪ್ ಡಿ ಸಿಬ್ಬಂದಿಯೊಂದಿಗೆ ಸುಸಜ್ಜಿತವಾಗಿ ಸಿದ್ಧವಾಗಿದೆ.
ಈ ಆಸ್ಪತ್ರೆಯನ್ನು ಕೊರೊನಾ ಸೋಂಕಿತರು, ಶಂಕಿತರಿಗಾಗಿ ಐಸೋಲೇಶನ್ ವಾರ್ಡ್ ಎಂದು ವಿಭಾಗಿಸಲಾಗಿದೆ. ಒಟ್ಟು 60 ಬೆಡ್ಗಳನ್ನು ಮೀಸಲಿರಿಸಲಾಗಿದೆ. (ಕೊರೋನೇತರರ ಚಿಕಿತ್ಸೆಗೆ ಎಂದಿನಂತೆ ಪ್ರತ್ಯೇಕ ವ್ಯವಸ್ಥೆ ಇದೆ).
ಜಿಲ್ಲೆಯಲ್ಲಿ ಪ್ರತಿದಿನ 2,000 ದಿಂದ 2,500ರಷ್ಟು ಗಂಟಲು ದ್ರವ ಮಾದರಿ ತಪಾಸಣೆ ನಡೆಸಲಾಗುತ್ತಿದೆ. ಸರಕಾರಿ ಆಸ್ಪತ್ರೆಯಲ್ಲಿ ಸಂಗ್ರಹ ವಾಗುತ್ತಿರುವ ಗಂಟಲು ದ್ರವ ಮಾದರಿಯನ್ನು ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಲ್ಯಾಬ್ಗಳಿಗೆ, ಖಾಸಗಿ ಆಸ್ಪತ್ರೆಯಲ್ಲಿ ಸಂಗ್ರಹವಾಗುವ ಗಂಟಲು ದ್ರವ ಮಾದರಿ ಮಣಿಪಾಲದ ಕೆಎಂಸಿ, ಸುಳ್ಯ ಹಾಗೂ ಶ್ರೀನಿವಾಸ್ ಆಸ್ಪತ್ರೆಯ ಕೊರೊನಾ ಲ್ಯಾಬ್ಗಳಲ್ಲಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ (ಅಗತ್ಯ ಸಂದರ್ಭದಲ್ಲಿ ಮಾತ್ರ).
ಜಿಲ್ಲಾಡಳಿತದಿಂದ ಪ್ರಸ್ತುತ 42 ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ. ಆಸ್ಪತ್ರೆಗಳ ಸಂಖ್ಯೆ ಇನ್ನಷ್ಟು ಹೆಚ್ಚಳ ಮಾಡಬಹುದು. ಒಟ್ಟು 1,987 ಹಾಸಿಗೆ, 87 ಐಸಿಯು, 77 ವೆಂಟಿಲೇಟರ್ ಹಾಸಿಗೆ ಇದೆ. ಹಾಗಾಗಿ ಕೊರೊನೇತರ ಚಿಕಿತ್ಸೆಗೆ ಯಾವುದೇ ಸಮಸ್ಯೆ ಇಲ್ಲ.
"ಕಳೆದ ಬಾರಿ ಸಿಬ್ಬಂದಿಗಳ ಕೊರತೆಯಿಂದ ನಲುಗಿ ಹೋಗಿದ್ದ ಜಿಲ್ಲಾಸ್ಪತ್ರೆಗೆ ಈ ಬಾರಿ 40 ಸಿಬ್ಬಂದಿಗಳು ಕೊರೊನಾ ಚಿಕಿತ್ಸೆಗಾಗಿಯೇ ನೇಮಕಗೊಂಡಿದ್ದಾರೆ. ಆ ಪೈಕಿ ಇಬ್ಬರು ತಜ್ಞ ವೈದ್ಯರು, 1 ಅರವಳಿಕೆ ತಜ್ಞರು, 6 ಮಂದಿ ಕರ್ತವ್ಯ ನಿರತ ವೈದ್ಯರು, 20 ಮಂದಿ ಸ್ಟಾಫ್ ನರ್ಸ್ ಹಾಗೂ 10 ಮಂದಿ ಡಿ ಗ್ರೂಪ್ ದರ್ಜೆಯ ಸಿಬ್ಬಂದಿಗಳು ನೇಮಕಗೊಂಡಿದ್ದಾರೆ" ಎಂದು ಜಿಲ್ಲಾ ಸರ್ಜನ್ ಡಾ ಮಧುಸೂದನ್ ನಾಯಕ್ ಮಾಹಿತಿ ನೀಡಿದ್ದಾರೆ.
ಪ್ರತಿದಿನ ಸುಮಾರು 2,000-2,500 ದಷ್ಟು ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತದೆ. ಪೂಲಿಂಗ್ ಟೆಸ್ಟ್ ವಿಧಾನದಲ್ಲಿ ಒಂದೇ ಬಾರಿಗೆ 5 ಮಾದರಿಯನ್ನು ತಪಾಸಣೆ ಮಾಡಲಾಗುತ್ತದೆ. ಇದು ಕೊರೊನಾ ಪ್ರಮಾಣ ಕಡಿಮೆ ಇರುವ ಸಂದರ್ಭದಲ್ಲಿ ಮಾತ್ರ ಸಾಧ್ಯವಾಗುತ್ತದೆ. ಈ ವಿಧಾನದಲ್ಲಿ ಒಂದೇ ಒಂದು ಮಾದರಿ ಪಾಸಿಟಿವ್ ಬಂದರೂ ಮತ್ತೆ ಐದನ್ನೂ ಪರೀಕ್ಷೆಗೆ ಒಳಪಡಿಸಬೇಕು. ಆದರೆ ಪೂಲಿಂಗ್ ಅಲ್ಲದ ವಿಧಾನದಲ್ಲಿ ಒಂದೊಂದೇ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತದೆ.