ಉಡುಪಿ, ಏ.29 (DaijiworldNews/MB) : ಅನೇಕ ಆಸ್ಪತ್ರೆಗಳು ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳು ನಮ್ಮಲ್ಲಿ ಈಗ ಇಲ್ಲ ಎಂದು ಹೇಳಿ ಲಸಿಕೆಗಾಗಿ ನೋಂದಾಯಿಸಿದ ಜನರನ್ನು ಹಿಂದಕ್ಕೆ ಕಳುಹಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಜನರು ಲಸಿಕೆ ಲಭಿಸದೆ ವಾಪಾಸ್ ಬರುತ್ತಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆ ಕಾಣಿಸಿಕೊಂಡಿವೆ.
ಕೊವಾಕ್ಸಿನ್ನ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಅನ್ನು 28 ರಿಂದ 42 ದಿನಗಳ ನಡುವೆ ಪಡೆಯಲು ತಿಳಿಸಲಾಗಿತ್ತು. ಆದರೆ ಜನರು ಆಸ್ಪತ್ರೆಗಳಿಗೆ ಬಂದಾಗ ಅಧಿಕಾರಿಗಳು ತಮ್ಮ ಬಳಿ ಸ್ಟಾಕ್ ಇಲ್ಲ ಎಂದು ಹೇಳಿದ್ದಾರೆ. 45 ವರ್ಷಕ್ಕಿಂತ ಮೇಲ್ಪಟ್ಟ ಜನರು ಮತ್ತೆ ಮತ್ತೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಲಸಿಕೆ ಇಲ್ಲ ಎಂಬ ಕಾರಣಕ್ಕೆ ವಾಪಾಸ್ ತೆರಳಬೇಕಾಗಿದ್ದರಿಂದ ನಿರಾಶೆಗೊಂಡಿದ್ದಾರೆ. ಕೆಲವರು ಆಸ್ಪತ್ರೆ ಸಿಬ್ಬಂದಿಗಳ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ.
ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ನೆರೆದಿದ್ದ ಜನರು ಲಸಿಕೆ ಲಭ್ಯವಿಲ್ಲದಿರುವ ವಿಚಾರದಲ್ಲಿ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದು, ಕೊನೆಗೆ ಪೊಲೀಸರು ಸ್ಥಳಕ್ಕೆ ಬರಬೇಕಾಯಿತು. ಆದಾಗ್ಯೂ, ಉಡುಪಿ ಜಿಲ್ಲೆಯಲ್ಲಿ, ಕೋವಾಕ್ಸಿನ್ ಮೊದಲ ಡೋಸ್ ಮತ್ತು ಕೋವಿಶೀಲ್ಡ್ ಎರಡನೇ ಡೋಸ್ ಲಭ್ಯವಿದೆ ಎಂದು ಹೇಳಲಾಗುತ್ತಿದೆ.
ಆದರೆ ಮಂಗಳೂರಿನಲ್ಲಿ, ಆಸ್ಪತ್ರೆಗಳಿಗೆ ಸಾಕಷ್ಟು ಕೋವಿಶೀಲ್ಡ್ ಲಸಿಕೆ ಲಭ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಲಸಿಕೆ ನೀಡಲಾಗುತ್ತಿಲ್ಲ ಎಂದು ಹೇಳಿದೆ.
ವ್ಯಾಕ್ಸಿನೇಷನ್ ಉಸ್ತುವಾರಿ ಉಡುಪಿ ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ರಾಜೇಶ್ ಬಿ ವಿ ಅವರು ಮಾತನಾಡಿ, ಕಳೆದ ಎರಡು ದಿನಗಳಿಂದ ಕೋವಾಕ್ಸಿನ್ ಕೊರತೆ ಇದೆ. ಮುಂದಿನ ವಾರದಲ್ಲಿ ಲಭ್ಯವಾಗಬಹುದು. ನಂತರ ಜನರು ತಮ್ಮ ಎರಡನೇ ಡೋಸ್ ಪಡೆಯಬಹುದು. ಕೆಲವು ದಿನಗಳ ವಿಳಂಬ ದೊಡ್ಡ ವಿಷವೇನಾಗಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಎರಡು ದಿನಗಳಿಗೆ ಆಗುವಷ್ಟು ಕೋವಿಶೀಲ್ಡ್ ಸ್ಟಾಕ್ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಮಾಹಿತಿ ನೀಡಿದ್ದು, 12,000 ಕೋವಾಕ್ಸಿನ್ ಲಸಿಕೆ ಲಭ್ಯವಾಗಿದ್ದು, ಎಲ್ಲಾ ಆಸ್ಪತ್ರೆಗಳಿಗೆ ಸ್ಟಾಕ್ ವಿತರಿಸಲಾಗಿದೆ. ಆದರೆ ಈಗ ಯಾವುದೇ ಸ್ಟಾಕ್ ಇಲ್ಲ. ಶೀಘ್ರದಲ್ಲೇ ಲಸಿಕೆ ಆಸ್ಪತ್ರೆಗಳಿಗೆ ತಲುಪಲಿದೆ ಎಂದು ತಿಳಿಸಿದರು.
ಹಾಗೆಯೇ ಸೇಂಟ್ ಸೆಸಿಲಿ ಶಾಲೆಗೆ ಜಿಲ್ಲಾ ಆಸ್ಪತ್ರೆಯಲ್ಲಿನ ಲಸಿಕೆ ಕೇಂದ್ರವನ್ನು ಸ್ಥಳಾಂತರಿಸಲಾಗುವುದು ಎಂದು ಹೇಳಿದರು.