ಮಂಗಳೂರು, ಏ 29(DaijiworldNews/MS): ಕೊರೊನಾ ಪ್ರಕರಣ ಹೆಚ್ಚುತ್ತಿರುವಂತೆಯೇ ಕೋವಿಡ್ ಲಸಿಕೆ ಪಡೆಯಲು ನಗರದ ವೆನ್ಲಾಕ್ ಆಸ್ಪತ್ರೆಗೆ ಜನ ಮುಗಿಬಿದ್ದಿದ್ದ ಘಟನೆ ಏ.29 ರ ಗುರುವಾರ ನಡೆದಿದೆ.
ಬೆಳಗ್ಗೆ 6 ಗಂಟೆಯಿಂದಲೇ ಲಸಿಕೆಗಾಗಿ ವೆನ್ಲಾಕ್ ಆಸ್ಪತ್ರೆಯ ಆಯುಷ್ ಬ್ಲಾಕ್ ಮುಂದೆ ಜನ ಬರಲಾರಂಭಿಸಿದ್ದು, ಸುಮಾರು 200 ಕ್ಕೂ ಹೆಚ್ಚು ಜನ ಸಾಮಾಜಿಕ ಅಂತರವಿಲ್ಲದೆ ಗುಂಪು ಗುಂಪಾಗಿ ಕಾಯುತ್ತಿದ್ದಾರೆ.
ಕೋವಿಶೀಲ್ಡ್ ಲಸಿಕೆಯೂ 2ನೇ ಡೋಸ್ ಹಾಕಲು ಬಂದವರಿಗೆ ಮಾತ್ರ ಟೋಕನ್ ವಿತರಿಸಲಾಗುತ್ತಿದೆ. ಜಿಲ್ಲಾಧಿಕಾರಿ ಬಂದ ನಂತರ ಮೊದಲ ಲಸಿಕೆ ನೀಡುತ್ತೇವೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದ್ದು ಹೀಗಾಗಿ ಲಸಿಕೆ ಪಡೆಯಲೆಂದು ಸೇರಿದ್ದ ಜನರು ದ.ಕ ಜಿಲ್ಲಾಡಳಿತ ದ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳದಲ್ಲಿ ಗದ್ದಲ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಹೆಚ್ಚಿನ ಸಾವು ನೋವು, ಕೊರೊನಾ ಸೋಂಕಿನ ವ್ಯಾಪಕ ಹರಡುವಿಕೆಯಿಂದ ಹೆಚ್ಚಿನ ಮಂದಿ ಲಸಿಕೆ ತೆಗೆದುಕೊಳ್ಳಲು ಆಕಾಂಕ್ಷೆ ವ್ಯಕ್ತಪಡಿಸಿ ಒಮ್ಮೆಲೆ ಮುಗಿಬೀಳುತ್ತಿರುವ ಕಾರಣ ಹೆಚ್ಚಿನ ಲಸಿಕೆಯ ಅವಶ್ಯಕತೆ ಕಂಡುಬರುತ್ತಿದೆ.