ಮಂಗಳೂರು, ಏ 29(DaijiworldNews/MS): ಕೇರಳದ ಪಶ್ಚಿಮ ಮೀನುಗಾರಿಕಾ ಧಕ್ಕೆಯಿಂದ ಮೀನುಗಾರಿಕೆಗೆ ತೆರಳಿ್ ನಾಪತ್ತೆಯಾಗಿದ್ದ ‘ಮರ್ಸಿಡಿಸ್’ ಎಂಬ ತಮಿಳುನಾಡು ಮೂಲದ ಮೀನುಗಾರಿಕಾ ಬೋಟ್ ಲಕ್ಷ ದ್ವೀಪದಿಂದ ಸುಮಾರು 200 ಮೈಲಿ ದೂರದಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.
ಎ.6ರಂದು ಈ ಬೋಟ್ ಆಳ ಸಮುದ್ರದ ಮೀನುಗಾರಿಕೆಗಾಗಿ 11 ಸಿಬ್ಬಂದಿಯೊಂದಿಗೆ ತೆರಳಿ ಸಂಪರ್ಕ ಕಡಿದುಕೊಂಡಿತ್ತು. ಇದೀಗ ಅವರನ್ನು ಕೋಸ್ಟ್ ಗಾರ್ಡ್ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಅದಲ್ಲಿದ್ದ ಎಲ್ಲಾ 11 ಮೀನುಗಾರರನ್ನು ನವಮಂಗಳೂರು ಬಂದರಿನ ಮೂಲಕ ಕರೆತಂದು ಕೋಸ್ಟ್ ಗಾರ್ಡ್ ಸಂಬಂಧಪಟ್ಟವರಿಗೆ ಹಸ್ತಾಂತರಿಸಲಿದೆ.
ಕೇರಳದ ಪಶ್ಚಿಮಕ್ಕೆ 30 ದಿನಗಳ ಪ್ರಯಾಣಕ್ಕಾಗಿ ಹೊರಟಿದ್ದ ಮರ್ಸಿಡಿಸ್ನ್ನೇ ಹೋಲುವ ಬೋಟ್ನ ಅವಶೇಷಗಳು ಬಂಗಾಳ ಕೊಲ್ಲಿಯಲ್ಲಿ, ಗೋವಾ ಕರಾವಳಿಯಿಂದ 110 ಕಿ.ಮೀ. ದೂರದ ಸಮುದ್ರದಲ್ಲಿ ಪತ್ತೆಯಾಗಿತ್ತು. ಹಾಗಾಗಿ ಮರ್ಸಿಡಿಸ್ ಮುಳುಗಿ ಅದರಲ್ಲಿದ್ದ ಎಲ್ಲ ಮೀನುಗಾರರು ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿತ್ತು.
ಈ ನಡುವೆ ಕರಾವಳಿ ರಕ್ಷಣಾ ಪಡೆ (ಐಸಿಜಿ) ಮತ್ತು ಭಾರತೀಯ ನೌಕಾಪಡೆ ಸಾಗರದಲ್ಲಿ ಸತತ ಶೋಧ ನಡೆಸಿತ್ತು. ಇದೀಗ ಮರ್ಸಿಡಿಸ್ ಲಕ್ಷ ದ್ವೀಪದಿಂದ ಸುಮಾರು 200 ಮೈಲಿ ದೂರದಲ್ಲಿ ಪತ್ತೆಯಾಗಿದೆ. ಹಡಗಿನಲ್ಲಿದ್ದ ಎಲ್ಲಾ ಮೀನುಗಾರರು ಸುರಕ್ಷಿತರಾಗಿದ್ದಾರೆ. ಅವರನ್ನ ದಡಕ್ಕೆ ತರಲಾಗುತ್ತಿದೆ. ಮೇ 3ರಂದು ಮರ್ಸಿಡಿಸ್’ ಸುರಕ್ಷಿತವಾಗಿ ತೀರಕ್ಕೆ ತಲುಪಬಹುದು ಎಂದು ಐಸಿಜಿ ಪ್ರಕಟನೆಯಲ್ಲಿ ತಿಳಿಸಿದೆ