ಬೆಂಗಳೂರು, ಸೆ 21(SM):‘ನಾಡಿನ ಜನರಿಗೆ ಬಿಜೆಪಿ ವಿರುದ್ದ ದಂಗೆ ಏಳಲು ಕರೆ ಕೊಡುತ್ತೇನೆ’ ಎಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ತಮ್ಮ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆಯನ್ನು ನೀಡಿದ್ದಾರೆ. ಬಿಜೆಪಿ ಮುಖ್ಯಮಂತ್ರಿಗಳ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದೆ.
ಈ ನಡುವೆ ರಾಜ್ಯದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಈ ರೀತಿಯ ಹೇಳಿಕೆ ನೀಡಿರುವುದಕ್ಕೆ ವಿವಿಧ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಹೇಳಿಕೆಯನ್ನು ಖಂಡಿಸಿದ್ದಾರೆ. 'ಹಿಂದೆ ಯಡಿಯೂರಪ್ಪ ಅವರು ಸರ್ಕಾರದ ವಿರುದ್ಧ ದೊಣ್ಣೆ, ಬಡಿಗೆ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದ್ದರು. ಇದಕ್ಕಿಂತ ಕೆಟ್ಟ ಪದವನ್ನು ನಾನು ಬಳಸಿಲ್ಲ. ಬಿಜೆಪಿ ಮುಖಂಡರು ಭೂಗತ ವ್ಯಕ್ತಿಗಳ ಸಂಪರ್ಕ ಇಟ್ಟುಕೊಂಡು ಹಣ ಶೇಖರಣೆ ಮಾಡಿಕೊಂಡು, ಸರ್ಕಾರ ಕಡೆವಲು ಮುಂದಾದರೆ ಮೌನವಾಗಿ ಕುಳಿತುಕೊಳ್ಳಲು ಆಗುತ್ತಾ?' ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಗುರುವಾರ ರಾತ್ರಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಕುಮಾರಸ್ವಾಮಿ ಅವರ ಹೇಳಿಕೆ, ಆಪರೇಷನ್ ಕಮಲದ ಬಗ್ಗೆ ಚರ್ಚೆ ನಡೆಯಿತು. ಮುಖ್ಯಮಂತ್ರಿಗಳ ಹೇಳಿಕೆ ಖಂಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಭಾರಿ ಟೀಕೆಗಳು ಬಂದ ಬಳಿಕ ಅವರು ಸ್ಪಷ್ಟನೆ ನೀಡಿದ್ದಾರೆ. 'ದಂಗೆ ಅಂದರೆ ಜನರ ಪ್ರತಿಭಟನೆ ಇದರಲ್ಲಿ ತಪ್ಪೇನಿದೆ?. ಬಿಜೆಪಿ ಮುಖಂಡರು ಭೂಗತ ವ್ಯಕ್ತಿಗಳ ಸಂಪರ್ಕ ಇಟ್ಟುಕೊಂಡು ಹಣ ಶೇಖರಣೆ ಮಾಡಿಕೊಂಡು, ಸರ್ಕಾರವನ್ನು ಉರುಳಿಸಲು ಮುಂದಾದರೆ ಮೌನವಾಗಿ ಕುಳಿತುಕೊಳ್ಳಲು ಆಗುತ್ತಾ?' ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
'ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಾನೂನು, ಸಂವಿಧಾನದ ಮೇಲೆ ನಂಬಿಕೆ ಇದೆಯೇ ಎಂದು ಮೊದಲು ತಿಳಿಸಲಿ. ದಂಗೆ ಏಳಬೇಕು ಎಂದು ಕರೆಕೊಟ್ಟ ಬಳಿಕ ಯಡಿಯೂರಪ್ಪ ಮನೆ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಇಂತಹ ಹೇಳಿಕೆಯನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ನಿಮಗೆ ನಂಬಿಕೆ ಇದ್ದರೆ ರಾಜ್ಯದ ಜನರ ಕ್ಷಮೆ ಕೇಳಿ' ಎಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ದಂಗೆ ಎಬ್ಬಿಸಿ ಕುಮಾರಸ್ವಾಮಿ ಅವರು ಇಂದು ನಾನು ಹಾಗೆ ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಗುರುವಾರ ಯಡಿಯೂರಪ್ಪ ಮನೆ ಮುಂದೆ ನಡೆದ ದಾಳಿಯೇ ಅವರ ಹೇಳಿಕೆಗೆ ಸಾಕ್ಷಿ. ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಕೇಳಿದ್ದೇವೆ. ಸಮಯ ಸಿಕ್ಕರೆ ಇಂದು ಕುಮಾರಸ್ವಾಮಿ ಅವರ ವಿರುದ್ಧ ದೂರು ನೀಡುತ್ತೇವೆ' ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.