ಮಂಗಳೂರು, ಸೆ 21(SM): ನೀರಿನ ಟ್ಯಾಂಕ್ ಅಳವಡಿಸುವ ಸಂದರ್ಭದಲ್ಲಿ ಸ್ಲ್ಯಾಬ್ ಕುಸಿದ ಪರಿಣಾಮ ಮೂವರು ಕಾರ್ಮಿಕರು ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಘಟನೆ ನಗರದ ಬಜಾಲ್ ಕ್ರಾಸ್ ಸಮೀಪದ ಚರ್ಚ್ ಜಂಕ್ಷನ್ ಬಳಿ ಶುಕ್ರವಾರ ಮುಂಜಾನೆ ನಡೆದಿದೆ. ಇವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ಕಟ್ಟಡದ ಮೊದಲನೇ ಮಹಡಿಯನ್ನು ಎತ್ತರಕ್ಕೇರಿಸಿ ಅಲ್ಲಿ ನೀರಿನ ಟ್ಯಾಂಕ್ ಅಳವಡಿಸುವ ಕಾಮಗಾರಿ ನಡೆಸಲಾಗುತ್ತಿತ್ತು, ಈ ಸಂದರ್ಭದಲ್ಲಿ ಸ್ಲ್ಯಾಬ್ ಗಟ್ಟಿಯಾಗಿರದ ಕಾರಣ ಏಕಾಏಕಿ ಕುಸಿದಿದೆ. ನೀರಿನ ಟ್ಯಾಂಕ್ ಅಳವಡಿಸಲೆಂದು ಅದರ ಮೇಲೆ ನಿಂತಿದ್ದ ಮೂವರು ಕಾರ್ಮಿಕರು ಕೂಡಾ ಕೆಳಕ್ಕೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಲ್ಯಾಬ್ ಸಂಪೂರ್ಣ ಗಟ್ಟಿಯಾಗುವ ಮೊದಲೇ ನೀರಿನ ಟ್ಯಾಂಕ್ ಅಳವಡಿಸಲು ಮುಂದಾಗಿರುವುದೇ ದುರಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.