ನವದೆಹಲಿ, ಸೆ 21 (MSP): ಗಾಢ ನಿದ್ರೆಯಲ್ಲಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಹಿಂದುಗಳು ಮಾಡಬೇಕಾಗಿದೆ. ರಾಮ ಮಂದಿರ ನಿರ್ಮಾಣದ ಕನಸುಗಳನ್ನು ಮೋದಿ ಸರ್ಕಾರ ಹೊಸಕಿ ಹಾಕಿದೆ. ರಾಮನನ್ನು ಮರೆತ ನರೇಂದ್ರ ಮೋದಿ ಸರ್ಕಾರ ಮುಸ್ಲಿಂ ಮಹಿಳೆಯರ ಪರ ವಕೀಲ ಕೆಲಸ ಮಾಡುತ್ತಿದೆ ಎಂದು ವಿಶ್ವ ಹಿಂದು ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಅಕ್ಟೋಬರ್ 21 ರಂದು ಲಖನೌನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ಪ್ರತಿಭಟನೆಗೆ ತೊಗಾಡಿಯಾ ಅವರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ಅ.21 ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ನಾವೂ ಕೂಡ ಭಾಗಿಯಾಗುತ್ತೇವೆ. ನಿದ್ದೆಯಲ್ಲಿರುವ ಸರ್ಕಾರವನ್ನು ಎಚ್ಚರಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಮೋದಿ ಸರ್ಕಾರವು ಯುವಕರಿಗೆ ಉದ್ಯೋಗ ಕೊಡಿಸುತ್ತದೆ, ರಾಮ ಮಂದಿರ ನಿರ್ಮಾಣ ಮಾಡುತ್ತದೆ ಎಂಬ ಧೃಢ ನಂಬಿಕೆ ಇತ್ತು. ಆದರೆ ಈ ಎಲ್ಲಾ ಭರವಸೆಗಳು ಒಡೆದುಹೋಗಿದೆ. ಈಗ ತ್ರಿವಳಿ ತಲಾಖ್ ಬಗ್ಗೆ ಆಸಕ್ತಿ ತೋರಿಸಿ ಮುಸ್ಲಿಂ ಮಹಿಳೆಯರ ಲಾಯರ್ ನಂತೆ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದರು.