ಮಂಗಳೂರು, ಏ.26 (DaijiworldNews/MB) : ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಶವಸಂಸ್ಕಾರಕ್ಕೆ ಸ್ವತಃ ಮನೆಯವರೇ ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಮುಸ್ಲಿಂ ಮಹಿಳಾ ತಂಡವೊಂದು ಮಹಿಳೆಯರ ಶವಗಳ ಮಯ್ಯತ್ ಸ್ನಾನದ ಸಂಸ್ಕಾರ ನಡೆಸುತ್ತಿದೆ. ಈಗಾಗಲೇ ಈ ತಂಡವು ಮಂಗಳೂರಿನಲ್ಲಿ 7ಕ್ಕೂ ಅಧಿಕ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಮಹಿಳೆಯರ ಶವಗಳಿಗೆ ಮಯ್ಯತ್ ಸ್ನಾನದ ಸಂಸ್ಕಾರ ನಡೆಸಿದೆ. ಈ ಮೂಲಕ ಸಾರ್ವಜನಿಕವಾಗಿ ಈ ತಂಡವು ಪ್ರಶಂಸೆಗೆ ಪಾತ್ರವಾಗಿದೆ.
ಮುಸ್ಲಿಂ ಸಮುದಾಯದಲ್ಲಿ ಅಂತ್ಯಕ್ರಿಯೆಗೂ ಮೊದಲು ಮಯ್ಯತ್ (ಶವದ ಸ್ನಾನ) ನಡೆಸಲಾಗುತ್ತದೆ. ಶವಕ್ಕೆ ಸ್ನಾನ ಮಾಡಿಸಿ ಬಟ್ಟೆ(ಕಫನ್) ಉಡಿಸಲಾಗುತ್ತದೆ. ಆ ಬಳಿಕ ಮುಂದಿನ ದಫನ ಕಾರ್ಯ ನಡೆಸಲಾಗುತ್ತದೆ. ಮಂಗಳೂರಿನ ನ್ಯಾಷನಲ್ ವುಮನ್ ಫ್ರಂಟ್ (ಎನ್ಡಬ್ಲ್ಯುಎಫ್) ಹೆಸರಿನ ಸಂಘಟನೆಯ ಈ ತಂಡವು ಶವ ದಫನಕ್ಕೂ ಮುನ್ನ ಮಯ್ಯತ್ ಸ್ನಾನ ಮಾಡಿಸುತ್ತಿದೆ. ಬಳಿಕ ದಫನ ಕಾರ್ಯವನ್ನು ನಡೆಸಲು ಶವವನ್ನು ಮನೆಯವರಿಗೆ ನೀಡುತ್ತಾರೆ ಅಥವಾ ತಮ್ಮ ಸುಪರ್ದಿಯಲ್ಲಿ ಬೇರೆಯವರಿಂದ ದಫನ ಕಾರ್ಯ ನಡೆಸುತ್ತಾರೆ.
ನ್ಯಾಷನಲ್ ವುಮನ್ ಫ್ರಂಟ್ ಸಂಘಟನೆಯ ಈ ತಂಡ ಪಿಪಿಇ ಕಿಟ್ ಧರಿಸಿಕೊಂಡು ಮಂಗಳೂರು ಸೇರಿದಂತೆ ರಾಜ್ಯದ 19 ಜಿಲ್ಲೆಗಳಲ್ಲಿ ಮಯ್ಯತ್ ಸ್ನಾನ ನಡೆಸುತ್ತಿದ್ದಾರೆ. ಒಂದು ತಂಡದಲ್ಲಿ ಆರು ಮಂದಿ ಸದಸ್ಯರಿದ್ದು ಒಟ್ಟು ಇಂತಹ 55 ತಂಡವನ್ನು ರಚನೆ ಮಾಡಲಾಗಿದೆ. ಈ ತಂಡಕ್ಕೆ ಧಾರ್ಮಿಕ ಪಂಡಿತರು ಮಯ್ಯತ್ ಸ್ನಾನ ಮಾಡಿಸುವ ಬಗ್ಗೆ ತರಬೇತಿ ನೀಡಿದ್ದಾರೆ. ಹಾಗೆಯೇ ವೈದ್ಯರು ಶವಗಳ ವಿಲೇವಾರಿ ಬಗ್ಗೆ ತರಬೇತಿ ನೀಡಿದ್ದಾರೆ.
ಇನ್ನು ಈ ತಂಡವು ಕಳೆದ ವರ್ಷ ಕೊರೊನಾ ಸೋಂಕು ಆರಂಭವಾದ ಸಂದರ್ಭದಲ್ಲಿ 80ಕ್ಕೂ ಅಧಿಕ ಮುಸ್ಲಿಂ ಮಹಿಳೆಯರ ಶವಗಳಿಗೆ ಮಯ್ಯತ್ ಸ್ನಾನ ಮಾಡಿಸಿದೆ. ಈ ಬಾರಿ ಮತ್ತೆ ಅಲ್ಲಲ್ಲಿ ಈ ಕಾರ್ಯ ಆರಂಭಿಸಿದ್ದಾರೆ.
ಅಷ್ಟಕ್ಕೂ ಈ ತಂಡವು ಇದಕ್ಕಾಗಿ ಯಾವುದೇ ಪ್ರತಿಫಲ ಬಯಸುತ್ತಿಲ್ಲ. ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಕುಟುಂಬಸ್ಥರು ಬಡವರಾಗಿದ್ದರೆ, ಪಿಪಿಇ ಕಿಟ್ನ ವೆಚ್ಚವನ್ನು ಸಂಘಟನೆಯಿಂದಲೇ ತಂಡ ಭರಿಸಿಕೊಳ್ಳುತ್ತದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನ್ಯಾಷನಲ್ ವುಮನ್ ಫ್ರಂಟ್ ರಾಜ್ಯ ಅಧ್ಯಕ್ಷೆ ಝೀನತ್, ''ಈ ತಂಡಕ್ಕೆ ಆರೋಗ್ಯವಂತ ಮಹಿಳೆಯರನ್ನಷ್ಟೇ ಆಯ್ಕೆ ಮಾಡಲಾಗಿದೆ. ಕೊರೊನಾವಲ್ಲದ ಶವಗಳ ಮಯ್ಯತ್ ಸ್ನಾನ ವಿಧಿವಿಧಾನದಂತೆ ನಡೆಸಲು ಒಂದು ಗಂಟೆ ಬೇಕಾಗುತ್ತದೆ. ಆದರೆ ಕೊರೊನಾ ಸೋಂಕಿತ ಮಹಿಳೆಯರ ಶವವಾದ ಕಾರಣ ಮಯ್ಯತ್ ಸ್ನಾನವನ್ನು ಅರ್ಧ ಗಂಟೆಯೊಳಗೆ ಬೇಗನೆ ವಿಧಿವಿಧಾನ ಮುಗಿಸಲಾಗುತ್ತದೆ. ಸ್ವತಃ ಮನೆಯವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ತನ್ನ ಕುಟುಂಬಸ್ಥರ ಶವ ಸಂಸ್ಕಾರ ನಡೆಸಲು ಹಿಂದೇಟು ಹಾಕುವ ಈ ಸಂದರ್ಭದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಶವಗಳಿಗೆ ಅಂತ್ಯಸಂಸ್ಕಾರ ನಡೆಸುವುದು ಸಂತಸದ ಕಾರ್ಯ'' ಎಂದು ಹೇಳುತ್ತಾರೆ.