ಮುಂಬೈ, ಸೆ20 (MSP): ಜೆಟ್ ಏರ್ವೇಯ್ಸ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ, ಪ್ರಯಾಣಿಕರು ತೊಂದರೆಗೊಳಗಾದ ಘಟನೆ ಮುಂಬೈನಲ್ಲಿ ನಡೆದಿದೆ. ಸಿಬ್ಬಂದಿಗಳು ಸಂಬಂಧಪಟ್ಟ ಸ್ವಿಚ್ ಹಾಕಲು ಮರೆತು ವಿಮಾನದೊಳಗೆ ತಾಂತ್ರಿಕ ದೋಷ ಕಾಣಿಸಿಕೊಂಡು, ಯಾಣಿಕರ ಮೂಗು, ಕಿವಿಯಲ್ಲಿ ರಕ್ತ ಸೋರಿಕೆಯಾಗಲು ಪ್ರಾರಂಭವಾಗಿದೆ. ಇನ್ನು ಕೆಲವರಿಗೆ ವಿಪರೀತ ತಲೆನೋವು ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಜೆಟ್ ಏರ್ವೇಯ್ಸ್ 9W 697 ವಿಮಾನವು ಸೆ.20 ರ ಗುರುವಾರ ಮುಂಬೈಯಿಂದ ಜೈಪುರಕ್ಕೆ ಪ್ರಯಾಣ ಬೆಳೆಸಿತ್ತು. ಇದರಲ್ಲಿ 166 ಮಂದಿ ಪ್ರಯಾಣಿಕರು ಹಾಗೂ 5 ಮಂದಿ ಸಿಬ್ಬಂದಿಗಳಿದ್ದರು .ಈ ವೇಳೆ ವಿಮಾನದಲ್ಲಿದ್ದ ಸಿಬ್ಬಂದಿ ಕ್ಯಾಬಿನ್ ಒತ್ತಡವನ್ನು ನಿರ್ವಹಿಸುವ ಸ್ವಿಚ್ ಹಾಕಲು ಮರೆತಿದ್ದಾರೆ. ಇದರಿಂದ ಆಮ್ಲಜನಕ ಮುಖವಾಡಗಳು ಸಿಗುವಲ್ಲಿ ವಿಳಂಬವಾಗಿದೆ. ಇದರ ಪರಿಣಾಮ ವಿಮಾನದಲ್ಲಿದ್ದ ಸುಮಾರು 30 ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತ ಕಾಣಿಸಿಕೊಂಡಿದೆ. ಬಳಿಕ ವೈದ್ಯಕೀಯ ಎಮೆರ್ಜನ್ಸಿ ಕಾರಣದಿಂದ ನಿಲ್ದಾಣಕ್ಕೆ ವಾಪಾಸ್ ಆದ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದ ಪ್ರಯಾಣಿಕರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ.
ತುರ್ತಾಗಿ ತೆರಳಬೇಕಾದ ಪ್ರಯಾಣಿಕರಿಗೆ ಬೇರೊಂದು ವಿಮಾನದಲ್ಲಿ ಕಳುಹಿಸಿಕೊಡಲಾಗಿದೆ. ಪ್ರಯಾಣಿಕರಿಗಾದದ ಅನಾನುಕೂಲತೆಗೆ ಜೆಟ್ ಏರ್ವೇಯ್ಸ್ ಕ್ಷಮೆಯಾಚಿಸುತ್ತದೆ ಎಂದು ಜೆಟ್ಏರ್ ವೇಯ್ಸ್ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಘಟನೆಯ ಕುರಿತಂತೆ ಈ ವೇಳೆ ಹಾಜರಿದ್ದ ಸಿಬ್ಬಂದಿಯ ವಿರುದ್ಧ ವಿಮಾನ ಅಪಘಾತ ತನಿಖಾ ದಳ (ಎಎಐಬಿ) ತನಿಖೆ ಕೈಗೆತ್ತಿಕೊಂಡಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಉಪನಿರ್ದೇಶಕ ಜನರಲ್ ಲಲಿತ್ ಗುಪ್ತಾ ತಿಳಿಸಿದ್ದಾರೆ.