ಕುಂದಾಪುರ, ಸೆ 20 (MSP): ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಮಗ್ರ ಮರಳು ನೀತಿ ಜಾರಿಗೆ ಬರಬೇಕು ಎಂದು ಆಗ್ರಹಿಸಿ ಕುಂದಾಪುರ ಟಿಪ್ಪರ್ ಮಾಲಕರ ಸಂಘದ ವತಿಯಿಂದ ಕುಂದಾಪುರದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, ಜಿಲ್ಲೆಯಲ್ಲಿ ಸುಮಾರು 1500ಕ್ಕೂ ಅಧಿಕ ಟಿಪ್ಪರ್ಗಳು ಹಾಗೂ ಮಿನಿ ಟಿಪ್ಪರ್ಗಳು ಹಾಗೂ ಅದರ ಮಾಲಕರು ಮರಳುಗಾರಿಕೆ, ಕಲ್ಲು ಸಾಗಾಣಿಕೆ ಹೀಗೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನೇ ಅವಲಂಭಿಸಿ ಬದುಕು ನಡೆಸುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಏಕಪಕ್ಷೀಯವಾಗಿ ಮರಳುಗಾರಿಕೆ ಸ್ಥಗಿತಗೊಳಿಸಿದ್ದು, ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳದೆ ಇರುವುದರಿಂದ ಟಿಪ್ಪರ್ ಹಾಗೂ ಮಿನಿ ಟಿಪ್ಪರ್ ಮಾಲಕರು ಬೀದಿಗೆ ಬರುವಂತಾಗಿದೆ. ಅಲ್ಲದೇ ಇದನ್ನೆ ನಂಬಿಕೊಂಡಿರುವ ಕೂಲಿ ಕಾರ್ಮಿಕರೂ ಹಾಗೂ ಇತರ ನಿರ್ಮಾಣ ಕಾರ್ಮಿಕರು ಕಳೆದ ಮೂರು ವರ್ಷಗಳಿಂದ ಕೆಲಸವಿಲ್ಲದೇ ಕಂಗಾಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣದಿಂದಲೇ ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಂಡು ಜಿಲ್ಲೆಗೆ ಸಮಗ್ರ ಮರಳು ನೀತಿ ಜಾರಿಗೆ ತರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ಕುಂದಾಪುರ ಉಪ ವಿಭಾಗಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ನೀಡಿ ಅಹವಾಲು ಪರಿಹರಿಸುವಂತೆ ಕೋರಲಾಯಿತು.