ಮಂಗಳೂರು, ಏ.25 (DaijiworldNews/MB) : ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಗಾಯಗೊಂಡಿದ್ದಾರೆ.
ಪಣಂಬೂರು ಠಾಣೆಯಲ್ಲಿ ದರೋಡೆ ಪ್ರಕರಣದಲ್ಲಿ ಬಂಧಿತನಾಗಿದ್ದ ಸಮೀರ್ ಎಂಬಾತ ಜೈಲಿನಲ್ಲಿದ್ದ ಇತರ ವಿಚಾರಣಾಧೀನ ಕೈದಿಗಳಿಗೆ ಹಲ್ಲೆ ನಡೆಸಿದ್ದಾನೆ. ಮುಲ್ಕಿ ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದ ಅನ್ಸಾರ್ ಮೇಲೆ ಹಲ್ಲೆ ನಡೆಸಿದ್ದಾನೆ.
ಬೆಳಗ್ಗಿನ ಉಪಾಹಾರದ ಸಮಯದಲ್ಲಿ ಮಾರಾಮಾರಿ ನಡೆದಿದ್ದು ಸಮೀರ್ ಸ್ಟೀಲ್ ಚಮಚ ಮತ್ತಿತರ ಅಡುಗೆ ಸಾಮಗ್ರಿಗಳನ್ನು ಬಳಸಿ, ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಅನ್ಸಾರ್ ಮತ್ತು ಮೂಡುಬಿದ್ರೆ ದರೋಡೆ ಪ್ರಕರಣದ ಜೈನುದ್ದೀನ್ ಎಂಬಾತ ಕೂಡ ಗಾಯಗೊಂಡಿದ್ದಾನೆ.
ಅನ್ಸಾರ್ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದರೆ, ಜೈನುದ್ದೀನ್ ಭುಜ ಮತ್ತು ಬೆನ್ನಿಗೆ ಗಾಯಗಳಾಗಿವೆ. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಸಲಾಗುತ್ತಿದೆ.
ಜೈಲಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದ್ದಾರೆ. ಕಮಿಷನರ್ ಒಳಗೆ ಹೋಗುತ್ತಲೇ ಜೋರು ದನಿಯಲ್ಲಿ ಒಳಗಿನಿಂದ ಬೊಬ್ಬೆ ಕೇಳಿದ್ದು ಘಟನೆಯಲ್ಲಿ ಪಾಲ್ಗೊಂಡವರಿಗೆ ಬೆನ್ನಿಗೆ ಲಾಠಿ ಏಟು ನೀಡಿದ್ದಾರೆ.