ಪುತ್ತೂರು, ಏ.25 (DaijiworldNews/MB) : ಎಸ್ಎಸ್ಎಲ್ಸಿಯ ಪಠ್ಯಕ್ರಮದಲ್ಲಿ ಯಶಸ್ವಿಯಾಗಿ ತುಳು ಲಿಪಿಯನ್ನು ಜಾರಿಗೆ ತಂದ ಬಳಿಕ ಈಗ ತುಳು ಭಾಷೆಗೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ನಡೆದಿದೆ. ಈಗ ಪಾಶ್ಚಾತ್ಯ ವರ್ಣಮಾಲೆಯ ಕೀಬೋರ್ಡ್ ಬದಲಿಗೆ ತುಳು ಲಿಪಿ ಇರುವ ವಿನೂತನ ಕೀಬೋರ್ಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಕಂಪ್ಯೂಟರ್ನಲ್ಲಿ ತುಳು ಲಿಪಿಯನ್ನು ಟೈಪ್ ಮಾಡಲು ಇದು ಸಹಾಯ ಮಾಡಲಿದೆ.
ಪುತ್ತೂರಿನ ಕೈಕಾರ ಸರಕಾರಿ ಪ್ರೌಢಶಾಲೆಯಲ್ಲಿ ಕ-ನಾದ ಫೊನೆಟಿಕ್ಸ್ ಕೀಲಿಮಣೆ ಅಳವಡಿಸಿಕೊಂಡು ಭಾಷಾ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇದರಿಂದಾಗಿ ಈ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಂಪ್ಯೂಟರ್ನಲ್ಲಿ 10 ಭಾರತೀಯ ಭಾಷೆ ಮತ್ತು ಇಂಗ್ಲಿಷ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಇತರ ಶಾಲೆಗಳಲ್ಲೂ ಇದನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ. ವಲಯ ಶಿಕ್ಷಣ ಅಧಿಕಾರಿ ಲೋಕೇಶ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸ್ಥಳೀಯ ದಾನಿಗಳಿಂದ ಆರ್ಥಿಕ ಸಹಾಯ ಪಡೆಯಲು ಇತರ ಶಾಲೆಗಳನ್ನು ಕೇಳಿಕೊಂಡಿದ್ದಾರೆ.
ಈ ವಿಶಿಷ್ಟ ಕೀಬೋರ್ಡ್ನಲ್ಲಿ ತುಳು, ಕನ್ನಡ, ತೆಲುಗು, ಮಲಯಾಳಂ, ಪಂಜಾಬಿ, ಒರಿಯಾ, ಗುಜರಾತಿ, ದೇವನಾಗರಿ, ಅಸ್ಸಾಮಿ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಯ ವರ್ಣಮಾಲೆಗಳಿವೆ. ತುಳು ಕಲಿತವರು ತುಳು ಲಿಪಿಯಲ್ಲಿಯೇ ಟೈಪ್ ಮಾಡಬಹುದು. ತುಳು ಲಿಪಿ ಅಧ್ಯಯನ ಮಾಡದವರು ಕನ್ನಡ ಕೀಬೋರ್ಡ್ನಲ್ಲೇ, ತುಳು ಭಾಷೆ ಆರಿಸಿಕೊಂಡು ಟೈಪ್ ಮಾಡಬಹುದು. ಇದೇ ಮಾದರಿಯನ್ನು ಎಲ್ಲ 10 ಭಾಷೆಗಳಿಗೂ ಬದಲಾಯಿಸಿಕೊಳ್ಳಲು ಅವಕಾಶವಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೀಬೋರ್ಡ್ ವಿನ್ಯಾಸಗೊಳಿಸಿದ ಕ-ನಾದ ಫೋನೆಟಿಕ್ಸ್ ನಿರ್ದೇಶಕ ಡಾ.ಗುರುಪ್ರಸಾದ್, "ಹೊಸ ಕೀಬೋರ್ಡ್ನಲ್ಲಿ ಎಲ್ಲಾ 52 ವರ್ಣಮಾಲೆಗಳಿಗೆ ಭಾರತೀಯ ಭಾಷೆಗಳ ಆಧಾರದ ಮೇಲೆ ಆದ್ಯತೆ ನೀಡಲಾಗಿದೆ. ಈ ವಿನ್ಯಾಸಕ್ಕೆ ಪೇಟೆಂಟ್ ಸಹ ಪಡೆಯಲಾಗಿದೆ'' ಎಂದು ತಿಳಿಸಿದ್ದಾರೆ.