ನವದೆಹಲಿ, ಸೆ 20(MSP): ನೇರವಾಗಿ ಭಾರತದೊಂದಿಗೆ ಯುದ್ದಕ್ಕೆ ಇಳಿಯುವ ಎದೆಗಾರಿಕೆ ಇಲ್ಲದ ಪಾಕಿಸ್ತಾನ ಸೇನೆಯೂ, ಉಗ್ರರನ್ನು ಛೂ ಬಿಟ್ಟು ಮೋಸದಾಟ ಆಡುತ್ತಿದ್ದು ಇದೀಗ ಮತ್ತೊಮ್ಮೆ ತನ್ನ ಭಯಾನಕ ಕ್ರೌರ್ಯ ಮೆರೆದಿದೆ. ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಕರ್ತವ್ಯದಲ್ಲಿದ್ದ ಬಿಎಸ್ಎಫ್ ಯೋಧನೊಬ್ಬನನ್ನು ಕತ್ತು ಸೀಳಿದ ಹೇಡಿ ಪಾಕ್ ಈ ಮೂಲಕ ತನ್ನ ಹತಾಶೆ ಹಾಗೂ ಕ್ರೌರ್ಯದ ಮನಸ್ಥಿತಿಯನ್ನು ಮತ್ತೊಮ್ಮೆ ಜಗತ್ತಿಗೆ ಬಹಿರಂಗಗೊಳಿಸಿದೆ.
ಜಮ್ಮುವಿನ ರಾಮಘಡ ಸೆಕ್ಟರ್ನಲ್ಲಿ ಗಡಿ ಕಾವಲು ಕಾಯುತ್ತಿದ್ದ ಬಿಎಸ್ಎಫ್ ಯೋಧ ನರೇಂದ್ರ ಸಿಂಗ್ ಅವರನ್ನು ಅಪರಿಸಿದ ಪಾಕ್ ಸೇನೆ ಕತ್ತು ಸೀಳಿ ಕೊಲೆ ಮಾಡಿದೆ. ಜಮ್ಮುವಿನ ರಾಮಘಡ ಸೆಕ್ಟರ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ಬೃಹತ್ ಗಾತ್ರದ ಹುಲ್ಲುಗಳು ಬೆಳೆದಿದ್ದರಿಂದ ಪಾಕ್ ದೇಶದ ಚಲನವಲನಗಳ ಬಗ್ಗೆ ನಿಗ ಇಡಲು ತೊಂದರೆ ಆಗಿತ್ತು. ಈ ಹಿನ್ನಲೆಯಲ್ಲಿ ಗಡಿ ಕಾವಲು ನಿರತ ಬಿಎಸ್ಎಫ್ ಯೋಧರು ಹುಲ್ಲು ಕತ್ತರಿಸುವ ಕೆಲಸದಲ್ಲಿ ಮಂಗಳವಾರ ತೊಡಗಿದ್ದರು. ಅತ್ತಕಡೆ ಜಮ್ಮು ಗಡಿ ವಲಯದಲ್ಲಿ ಸೋಮವಾರವಷ್ಟೇ ತಂತ್ರಜ್ಞಾನ ಆಧಾರಿತ 'ಸ್ಮಾರ್ಟ್ ಗಡಿ ಬೇಲಿ' ಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದರು. ಇದರಿಂದ ಬಾಲ ಸುಟ್ಟ ಬೆಂಕಿನಂತಾದ ಪಾಕ್ ಸೇನೆ, ರಾಮಘಡದಲ್ಲಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಈ ದಾಳಿಯ ಸಂದರ್ಭ ಯೋಧ ನರೇಂದ್ರ ಸಿಂಗ್ ನಾಪತ್ತೆಯಾಗಿದ್ದರು. ಸುಮಾರು 9 ಗಂಟೆಗಳ ಹುಡುಕಾಟದ ಬಳಿಕ ಮೂರು ಬುಲೆಟ್ಗಳು ಹೊಕ್ಕಿದ್ದ ಅವರ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿತ್ತು.
ಈ ಘಟನೆಯ ಬಳಿಕ ಉಭಯ ದೇಶಗಳ ಸಂಬಂಧ ಮತ್ತಷ್ಟು ಹಳಸಿದೆ. ಈ ಹಿಂದೆಯೂ 2013 ರಲ್ಲಿ ಸುಧಾಕರ್ ಸಿಂಗ್ ಎಂಬ ಯೋಧರ ಶಿರಚ್ಛೇದ ಹಾಗೂ 2017 ರಲ್ಲಿ ಪರಂಜಿತ್ ಸಿಂಗ್ ದೇಹ ಛಿದ್ರಗೊಳಿಸಿ ಪಾಕ್ ತನ್ನ ಕೌರ್ಯ ಮೆರೆದಿತ್ತು. ಯೋಧನ ಕತ್ತು ಸೀಳಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರ, ಉಗ್ರವಾಗಿ ಖಂಡಿಸಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶನಾಲಯ ಪಾಕಿಸ್ತಾನದ ಎದುರು ಈ ವಿಷಯವನ್ನು ಪ್ರಸ್ತಾಪಿಸಲಿದೆ.