ಕುಂದಾಪುರ, ಸೆ 20(MSP): ಸ್ವಂತ ಒಡ ಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿ ಹಾಡಿಯಲ್ಲಿ ಸುಟ್ಟು ಹಾಕಿ, ಬಳಿಕ ನಾಪತ್ತೆಯಾಗಿದ್ದಾನೆ ಎಂದು ಕತೆ ಕಟ್ಟಿದ ಆರೋಪಿ ಸಹೋದರರಿಗೆ ಕುಂದಾಪುರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮೃತಪಟ್ಟ ಮುತ್ತ ನಾಯ್ಕ
ಬೈಣದೂರಿನ ಗೋಳಿಹೊಳೆಯ ಕಂಬಳಗದ್ದೆ ನಿವಾಸಿಯಾಗಿದ್ದ ರಾಘವೇಂದ್ರ ನಾಯ್ಕ ಹಾಗೂ ದುರ್ಗಾ ನಾಯ್ಕ ಎಂಬುವರೇ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುವ ಕೊಲೆ ಆರೋಪಿಗಳು.ಎಪ್ರಿಲ್ 26ರಂದು ಘಟನೆ ನಡೆದಿದ್ದು, ಸಂಜೆ 4.30 ಸುಮಾರಿಗೆ ಅಣ್ಣ ಮುತ್ತ ನಾಯ್ಕ ಎಂಬಾತನಿಗೆ ಹೊಡೆದು ನೈಲಾನ್ ಹಗ್ಗದಿಂದ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿದ್ದರು. ನಂತರ ಅದೇ ದಿನ ರಾತ್ರಿ 7.30ರ ಸುಮಾರಿಗೆ ಸಮೀಪದ ಕುಮ್ಕಿ ಹಾಡಿಯಲ್ಲಿ ಚಿತೆ ನಿರ್ಮಿಸಿ ಸುಟ್ಟು ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಶವ ಹಾಗೂ ಕೃತ್ಯಕ್ಕೆ ಬಳಸಲಾಗಿತ್ತೆನ್ನಲಾದ ನೈಲಾನ್ ಹಗ್ಗವನ್ನು ಆರೋಪಿಗಳು ನಾಶ ಮಾಡಿದ್ದರು. ಆದರೆ ಚಿತೆಯಲ್ಲಿ ದೊರಕಿದ್ದ ಮೂಳೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.
ಕುಂದಾಪುರ ನ್ಯಾಯಾಲಯ ಇದೀಗ ಆರೋಪಿಗಳಿಗೆ ಷರತ್ತುಬದ್ದ ಜಾಮೀನು ನೀಡಿದೆ. ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಮೂಳೆಗಳು ಮೃತ ಮುತ್ತ ನಾಯ್ಕ ಅವರದ್ದೇ ಎಂದು ಸಾಬೀತಾಗಿತ್ತು.