ಮಂಗಳೂರು, ಸೆ 19(SM): ಸಮವಸ್ತ್ರ ಧರಿಸಿದ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಅವಾಂತರ ಸೃಷ್ಠಿಸಿದ್ದ ಸಂಚಾರಿ ಠಾಣಾ ಪೇದೆ ಅಶೋಕ್ ಗೌಡರನ್ನು ಅಮಾನತು ಮಾಡಿ ಇಲಾಖೆ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 19 ರ ಬುಧವಾರ ನಡೆದಿದ್ದು ಸಂಚಾರ ನಿಯಂತ್ರಿಸಬೇಕಾಗಿದ್ದ ಪೊಲೀಸಪ್ಪ ತನ್ನ ನಿಯಂತ್ರಣವನ್ನೇ ಕಳೆದುಕೊಂಡು ರಸ್ತೆಯಲ್ಲಿ ತೂರಾಡುತ್ತಿದ್ದ. ಮಂಗಳೂರಿನ ಲಾಲ್ ಬಾಗ್ ರಸ್ತೆಯಲ್ಲಿ ಪೇದೆ ಅಶೋಕ್ ಗೌಡ ಪಾನಮತ್ತನಾಗಿ ರಸ್ತೆ ಮಧ್ಯೆಯೇ ನಡೆದಾಡುತ್ತಿದ್ದ. ಅಲ್ಲದೆ ವಾಹನ ಸವಾರರಿಗೆ, ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದ.
ಪೇದೆಯ ವರ್ತನೆಯಿಂದ ಬೇಸತ್ತ ಸಾರ್ವಜನಿಕರು ಆತನಿಗೆ ಬುದ್ದಿವಾದ ಹೇಳಿದ್ದಾರೆ. ಸಮವಸ್ತ್ರದಲ್ಲಿದ್ದು, ಪಾನಮತ್ತರಾಗಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೆಲವರು ಆತನ ವರ್ತನೆಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಇನ್ನು ಕೆಲವರು ಪೇದೆಗೆ ಬುದ್ದಿವಾದ ಹೇಳಿದ್ದು ರಸ್ತೆಯಿಂದ ಪಕ್ಕಕ್ಕೆ ಕರೆದೊಯ್ದಿದ್ದರು. ಬಳಿಕ ಪೊಲೀಸರಿಗೆ ಮಾಹಿತಿಯನ್ನು ಕೂಡ ನೀಡಿದ್ದರು. ಸಾರ್ವಜನಿಕರೇ ಪೇದೆಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಪೇದೆಯ ಈ ವರ್ತನೆ ಇಲಾಖೆಗೆ ಮುಜುಗರವನ್ನುಂಟು ಮಾಡಿದ್ದು, ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇವರು ಪಾಂಡೇಶ್ವರ ಠಾಣೆಯಲ್ಲಿ ಕೆಲಸ ಮುಗಿಸಿ ತೆರಳುತ್ತಿದ್ದಾಗ ಪಾನಮತ್ತರಾಗಿ ಈ ರೀತಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯರ ಮಾಹಿತಿ ಪ್ರಕಾರ ಆಶೋಕ್ ಅವರಿಗೆ ಕುಡಿತದ ಚಟವಿದ್ದು, ಈ ಹಿಂದೆಯೂ ಹಲವು ಬಾರಿ ಕುಡಿದ ಅಮಲಿನಲ್ಲಿ ಇದೇ ರೀತಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ.