ಮಂಗಳೂರು, ಎ.23 (DaijiworldNews/PY): ಕೊರೊನಾ ಪರೀಕ್ಷಾ ವರದಿಯಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ದುಬೈಗೆ ಪ್ರಯಾಣಿಸಬೇಕಿದ್ದ ಕೆಲವು ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪರದಾಡಿದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ದುಬೈಗೆ ತೆರಳುವವರು 48 ಗಂಟೆ ಮೀರದ ಕೊರೊನಾ ಟೆಸ್ಟ್ ಪ್ರಮಾಣಪತ್ರ ಹೊಂದಿರಬೇಕು. ಕೊರೊನಾ ಟೆಸ್ಟ್ ಮಾಡಿರುವ ಆಸ್ಪತ್ರೆಯ ಕ್ಯುಆರ್ ಕೋಡ್ ಹೊಂದಿರಬೇಕು. ಆದರೆ, ಮಂಗಳೂರಿನ ಕೆಲ ಆಸ್ಪತ್ರೆಗಳಲ್ಲಿ ಕ್ಯುಆರ್ ಕೋಡ್ ಸಮಸ್ಯೆಯಿಂದಾಗಿ ಈ ತೊಂದರೆ ಎದುರಾಗಿದ್ದು, ಕೆಲವು ಪ್ರಯಾಣವನ್ನೇ ಮೊಟಕುಗೊಳಿಸಬೇಕಾಯಿತು.
ಭಾರತದಿಂದ ದುಬೈಗೆ ತೆರಳುವ ಪ್ರಯಾಣಿಕರ ಕೊರೊನಾ ಟೆಸ್ಟ್ ಪ್ರಮಾಣಪತ್ರದ ಕುರಿತಂತೆ ದುಬೈ ಸರ್ಕಾರ ಹೊಸ ನಿಯಮಾವಳಿಯನ್ನು ಜಾರಿ ಮಾಡಿದ್ದು, ಅದರ ಮಾಹಿತಿಯ ಪ್ರಕಾರ ಮಂಗಳೂರಿನ ಕೆಲ ಆಸ್ಪತ್ರೆಯವರಿಗೆ ಈ ವಿಚಾರ ತಡವಾಗಿ ತಿಳಿದ ಕಾರಣ ಈ ಸಮಸ್ಯೆ ಎದುರಾಗಿತ್ತು.
ವಿದೇಶಕ್ಕೆ ಪ್ರಯಾಣಿಸುವವರ ಅದರಲ್ಲೂ ಮುಖ್ಯವಾಗಿ ದುಬೈಗೆ ಪ್ರಯಾಣಿಸುವವರು ಹೊಂದಿರಬೇಕಾದ ಕೊರೊನಾ ಟೆಸ್ಟ್ ಪ್ರಮಾಣಪತ್ರದ ಅವಧಿಯನ್ನು 72 ಗಂಟೆಯಿಂದ 48 ಗಂಟೆಗೆ ಇಳಿಸಲಾಗಿದೆ.