ಉಡುಪಿ, ಎ.22 (DaijiworldNews/PY): ರಾಜ್ಯಾದ್ಯಂತ ಕೊರೊನಾ ಎರಡನೇ ಅಲೆ ಹೆಚ್ಚಳ ಹಿನ್ನೆಲೆ ರಾಜ್ಯ ಸರ್ಕಾರ ಇಂದು ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡುತ್ತಿರುವ ಬೆನ್ನಲ್ಲೇ ಉಡುಪಿ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಅಗತ್ಯ ಸೇವೆಗಳ ಹೊರತು ಉಳಿದೆಲ್ಲಾ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸುತ್ತಿದ್ದಾರೆ.
ಉಡುಪಿ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ದಿನಸಿ, ಹಾಲು, ತರಕಾರಿ ಅಂಗಡಿಗಳ ವ್ಯಾಪಾರಕ್ಕೆ ಮಾತ್ರ ಅವಕಾಶ. ಬಟ್ಟೆ, ಚಪ್ಪಲ್, ಫ್ಯಾನ್ಸಿ, ಜ್ಯುವೆಲ್ಲರಿ ಶಾಪ್ ಬಂದ್ ಮಾಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಮಾರ್ಗಸೂಚಿಯ ಉಲ್ಲಂಘನೆ ಕಂಡುಬಂದಲ್ಲಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದು ನಗರಸಭೆ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಎಪ್ರಿಲ್ 22ರಂದು ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ, ದಿನಸಿ, ಹಣ್ಣು, ಹೂವು ಅಂಗಡಿ, ತರಕಾರಿ ಅಂಗಡಿ, ಡೈರಿ, ಮಾಂಸ, ಔಷಧಿ, ಪ್ರಾಣಿಗಳ ಆಹಾರದ ಅಂಗಡಿಗೆ ಅನುಮತಿಸಲಾಗಿದೆ. ಮೊಬೈಲ್ ಶಾಪ್, ಟಿವಿ, ಎಲೆಕ್ಟ್ರಾನಿಕ್ ಶೋ ರೂಮ್, ಬ್ಯಾಂಗಲ್ಸ್ ಸ್ಟೋರ್, ಚಿನ್ನದ ಅಂಗಡಿ ಬುಕ್ ಶಾಪ್, ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಸ್ಟೋರ್, ಬಟ್ಟೆ ಅಂಗಡಿಗಳು ಇತ್ಯಾದಿ ಬಂದ್ ಮಾಡುವಂತೆ ಸೂಚಿಸಿದೆ.