ಮಂಗಳೂರು,ಸೆ 19 (MSP): ನಗರದಲ್ಲಿ ಭೂಗತ ಲೋಕದ ಪಾತಕಿಗಳು ಮತ್ತೆ ಸದ್ದು ಮಾಡಲಾರಂಭಿಸಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಮುಖಂಡ ಹಾಗು ಪ್ರಸಿದ್ಧ ಉದ್ಯಮಿ ಕಣಚೂರು ಮೋನು ಅವರಿಗೆ ಭೂಗತ ಲೋಕದ ಡಾನ್ ರವಿ ಪೂಜಾರಿ ಹಫ್ತಾ ನೀಡುವಂತೆ ಧಮ್ಕಿ ಹಾಕಿದ್ದಾರೆ. ಇಲ್ಲವಾದಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಸೆ. 18 ರ ಮಂಗಳವಾರ, ಕಣಚೂರು ಮೋನು ಅವರಿಗೆ ಈ ಕರೆ ಬಂದಿದ್ದು ತನ್ನನ್ನು ತಾನು ಪರಿಚಯಿಸಿಕೊಂಡ ಡಾನ್ ರವಿ ಪೂಜಾರಿ, ಮೋನು ಅವರಿಗೆ ರಾಜಕೀಯದಿಂದ ಹೊರ ನಡೆಯುವಂತೆ ಸೂಚಿಸಿದ್ದಾನೆ. ಬದುಕಬೇಕೆನ್ನುವ ಆಸೆ ಇದ್ರೆ ತಕ್ಷಣದಿಂದ ರಾಜಕೀಯ ಚಟುವಟಿಕೆ ಸ್ಥಗಿತಗೊಳಿಸಬೇಕು. ಮಾತ್ರವಲ್ಲದೆ ತನಗೆ ಹಫ್ತಾ ಸಂದಾಯ ಮಾಡಬೇಕು ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಭೀತಗೊಂಡ ಕಣಚೂರು ಮೋನು, ಫೋನ್ ಕಟ್ ಮಾಡಿದ್ದಾರೆ. ಆದರೂ ಪಾತಕಿ ಆರು ಬಾರಿ ಕರೆ ಮಾಡಿ ಬೆದರಿಸುವ ಪ್ರಯತ್ನ ಮಾಡಿದ್ರೂ ಮೋನು ಅವರು ಕರೆಯನ್ನು ಸ್ವೀಕರಿಸಿಲ್ಲ.
ಈ ಪೋನ್ ಕಾಲ್ ಥಾಯ್ ಲ್ಯಾಂಡ್ ನಿಂದ ಬಂದಿದ್ದು ಎನ್ನಲಾಗಿದ್ದು,ಕೆಟ್ಟ ಭಾಷೆ ಪ್ರಯೋಗಿಸಿ ಬೆದರಿಕೆ ಮೋನು ಅವರಿಗೆ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಕಣಚೂರು ಮೋನು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಣಚೂರು ಮೋನು ಅವರು ಕಾಂಗ್ರೆಸ್ ಮುಖಂಡರಾಗಿ ಮಾತ್ರವಲ್ಲದೆ, ಇತ್ತೀಚೆಗೆ ವೈದ್ಯಕೀಯ ಕ್ಷೇತ್ರಕ್ಕೂ ಕಾಲಿರಿಸಿದ್ದರು. ಇತ್ತೀಚೆಗೆ ಇವರ ಮಾಲೀಕತ್ವದ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆರಂಭಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸಲಹ ಸಮಿತಿಯ ಅಧ್ಯಕ್ಷರಾಗಿಯೂ ಮೋನು ಅವರು ಸೇವೆ ಸಲ್ಲಿಸುತ್ತಿದ್ದಾರೆ. ಈ ಕರೆ ಖುದ್ದು ಭೂಗತ ಪಾತಾಕಿ ರವಿ ಪೂಜಾರಿ ಅಥವಾ ಆತನ ಸಹಚರ ಕರೆ ಮಾಡಿದ್ದಾನೆಯೇ ಅಥವಾ ಇನ್ಯಾರೋ ರವಿ ಪೂಜಾರಿ ಹೆಸರು ಹೇಳಿಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೋ ಎನ್ನುವುದು ತನಿಖೆಯಿಂದಷ್ಟೇ ತಿಳಿದು ಬರಬೇಕು.