ಮಂಗಳೂರು, ಸೆ 19 (MSP): ನಗರದ ಹೊರವಲಯದ ಬಜ್ಪೆ ಬಳಿ ರಸ್ತೆ ಕಾಮಗಾರಿ ಹಾಗೂ ಡಾಂಬರೀಕರಣಕ್ಕಾಗಿ ತಂದಿದ್ದ ಡಾಂಬರು ಡಬ್ಬಿಯ ಒಳಗೆ ನಾಯಿಯೊಂದು ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಾ ವಿಲವಿಲನೆ ಒದ್ದಾಡುತ್ತಿದ್ದ ನಾಯಿಯನ್ನು ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್ ಸಿಬ್ಬಂದಿ ರಕ್ಷಿಸಿ ಅದಕ್ಕೆ ಮರು ಜೀವ ನೀಡಿದ್ದಾರೆ.
ರಸ್ತೆ ಕಾಮಗಾರಿಗಾಗಿ ತಂದಿದ್ದ ಡಬ್ಬದಲ್ಲಿದ್ದ ಡಾಂಬರು ಬಿಸಿಲಿನ ತಾಪಕ್ಕೆ ಕರಗಲಾರಂಭಿಸಿತ್ತು. ಈ ವೇಳೆ ಬೀದಿ ನಾಯಿಯೊಂದು ಆಕಸ್ಮಿಕವಾಗಿ ಡಾಂಬರು ಡಬ್ಬಿ ಒಳಗೆ ಬಿದ್ದಿದೆ. ಭಯಬೀತಗೊಂಡ ನಾಯಿ ಹೊರಬರುವ ಪ್ರಯತ್ನಕಾಗಿ ಒದ್ದಾಟ ನಡೆಸತೊಡಗಿದೆ. ಆದರೆ ಈ ಸಂದರ್ಭ ಸಂಪೂರ್ಣವಾಗಿ ನಾಯಿಯ ಮೈಗೆ ಡಾಂಬರು ತಗುಲಿ ಅತ್ತ ಹೊರಬರಲಾಗದೇ ಇತ್ತ ಬಿಸಿ ಡಾಂಬರನ್ನು ಸಹಿಸಲಾಗದೇ ನಾಯಿ ಸಾವು ಬದುಕಿನ ನಡುವೆ ಹೋರಾಟ ನಡೆಸತೊಡಗಿದೆ.
ಬಳಿಕ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಕ್ತಿ ನಗರದ ಅನಿಮಲ್ ಕೇರ್ ಟ್ರಸ್ಟ್ ಸದಸ್ಯರು, ನಾಯಿಯನ್ನು ಡಾಂಬರು ಡಬ್ಬಿಯಿಂದ ಕಷ್ಟಪಟ್ಟು ಹೊರತೆಗೆದಿದ್ದಾರೆ.ಬಳಿಕ ತಡ ಮಾಡದೇ ಶಕ್ತಿನಗರದಲ್ಲಿರುವ ಅನಿಮಲ್ ಕೇರ್ ಸೆಂಟರಿಗೆ ಕೊಂಡೊಯ್ದು ಸುಮಾರು ಹತ್ತು ಲೀಟರ್ನಷ್ಟು ಅಡುಗೆ ಎಣ್ಣೆಯನ್ನು ನಾಯಿಯ ಮೈಗೆ ಸುರಿದಿದ್ದಾರೆ. ಬಳಿಕ ನಿಧಾನಕ್ಕೆ ನಾಯಿ ಮೈಯಲ್ಲಿ ಅಂಟಿದ್ದ ಸುಮಾರು ಹತ್ತು ಕೆಜಿಗೂ ಹೆಚ್ಚು ಡಾಂಬರನ್ನು ಬಟ್ಟೆಯಿಂದ ನಿಧಾನವಾಗಿ ಉಜ್ಜಿ ತೆಗೆದಿದ್ದಾರೆ. ಹೀಗೆ ಅನಿಮಲ್ ಕೇರ್ ಸಿಬ್ಬಂದಿಗಳ 2-3 ಗಂಟೆಗಳ ಸತತ ಪರಿಶ್ರಮದಿಂದ ನಾಯಿ ಡಾಂಬರು ಮುಕ್ತವಾಗಿದೆ. ಸದ್ಯ ನಾಯಿ ಸಂಪೂರ್ಣ ಚೇತರಿಕೆ ಕಂಡಿದ್ದು ಮರುಜನ್ಮ ಪಡೆದಂತಾಗಿದೆ.