ಬೆಂಗಳೂರು, ಸೆ 18(SM): ರಾಜ್ಯದಲ್ಲಿ ನಡೆಯುತ್ತಿದ್ದ ಒಂದು ವಾರದ ರಾಜಕೀಯ ಹೈಡ್ರಾಮಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ಜಾರಕಿಹೊಳಿ ಸಹೋದರರ ಜೊತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದ್ದು ಅದು ಸಫಲವಾಗಿದೆ. ಆಮೂಲಕ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಭದ್ರವಾಗಿದೆ ಎಂದು ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆದಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸೆಪ್ಟೆಂಬರ್ ೧೮ರಂದು ಎಚ್.ಡಿ.ಕುಮಾರಸ್ವಾಮಿ ಅವರು ಸತೀಶ್ ಜಾರಕಿಹೊಳಿ ಅವರ ಜೊತೆ ಸಂಧಾನ ಸಭೆ ನಡೆಸಿದರು. ಈ ಸಭೆ ಯಶಸ್ವಿಯಾಗಿದೆ. ಜಾರಕಿಹೊಳಿ ಸಹೋದರರ ಬೇಡಿಕೆ ಈಡೇರಿಸಲು ಕುಮಾರಸ್ವಾಮಿ ಸಮ್ಮತಿಸಿದ್ದಾರೆ. ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, 'ನಮ್ಮ ಬೇಡಿಕೆ ಈಡೇರಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಹಂತ-ಹಂತವಾಗಿ ಎಲ್ಲಾ ಸಮಸ್ಯೆ ಬಗೆಹರಿಯಲಿದೆ' ಎಂಬುವುದಾಗಿ ಮುಖ್ಯಮಂತ್ರಿಗಳಿಂದ ಭರವಸೆ ಸಿಕ್ಕಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆ ಮೂಲಕ ಮತ್ತೊಮ್ಮೆ ಕುಮಾರಸ್ವಾಮಿ ಸರಕಾರ ಅಗ್ನಿ ಪರೀಕ್ಶೆಯೊಂದರಲ್ಲಿ ಗೆದ್ದಂತಾಗಿದೆ. ಮುಂದಿನ ೫ ವರ್ಷ ಆಡಳಿತಕ್ಕೆ ಅಡ್ಡಿಯಾಗಿದ್ದ ಮತ್ತೊಂದು ವಿಚಾರ ಸದ್ಯದ ಮಟ್ಟಿಗೆ ಬಗೆಹರಿದಂತಾಗಿದೆ. ಅಲ್ಲದೆ ಬಿಜೆಪಿ ರಾಜ್ಯ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಬಳಸಿಕೊಂಡಿದ್ದ ಮತ್ತೊಂದು ವಿಚಾರದಲ್ಲೂ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಪ್ರತಿ ಪಕ್ಷ ಬಿಜೆಪಿ, ಸರಕಾರ ಉರುಳಿಸಲು ಬೇರೆ ಮಾರ್ಗದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.