ಬೆಳ್ತಂಗಡಿ, ಸೆ 18(SM): ಬೆಳ್ತಂಗಡಿಯ ಲಾಯಿಲಾ ಗ್ರಾ.ಪಂ. ವ್ಯಾಪ್ತಿಯ ಪೆರೆಂದಿಲೆಯಲ್ಲಿ ಅಕ್ರಮವಾಗಿ ಕಪ್ಪು ಕಲ್ಲು ಗಣಿಗಾರಿಕೆಗೆ ಬೆಳ್ತಂಗಡಿ ಮದನ್ಮೋಹನ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಬೆಳ್ತಂಗಡಿ ಪೊಲೀಸರ ತಂಡ ದಾಳಿ ನಡೆಸಿದ್ದು, ಸ್ಥಳದಲ್ಲಿದ್ದ ಐದು ವಾಹನಗಳು ಸೇರಿದಂತೆ ಗಣಿಗಾರಿಕೆಗೆ ಬಳಸಲಾದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ದಾಳಿಯ ಬಗ್ಗೆ ಮಾಹಿತಿಯನ್ನು ಪಡೆದಿರುವ ಆರೋಪಿಗಳು ಪೊಲೀಸ್ ದಾಳಿಯ ವೇಳೆ ತಪ್ಪಿಸಿಕೊಂಡಿದ್ದಾರೆ. ಆದರೆ ಸ್ಥಳದಲ್ಲಿದ್ದ ಎರಡು ಲಾರಿಗಳು, ಎರಡು ಹಿಟಾಚಿ, ಒಂದು ಟ್ರ್ಯಾಕ್ಟರ್ ವಾಹನ ಸೇರಿದಂತೆ ಅಪಾರ ಪ್ರಮಾಣದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ತಹಶೀಲ್ದಾರ್ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮುಂದಿನ ಕ್ರಮಕ್ಕೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.
ದಾಳಿಯ ಸಂದರ್ಭ ಪೊಲೀಸರಿಗೆ ಕಲ್ಲು ಸ್ಪೋಟಿಸಲು ಬಳಸುತ್ತಿದ್ದ ಸ್ಪೋಟಕಗಳು ಪತ್ತೆಯಾಗಿರುವ ಕುರಿತು ತಹಶೀಲ್ದಾರ್ಗೆ ಮಾಹಿತಿ ಲಭಿಸಿದ್ದು, ಇದು ಸಾಭೀತಾದರೆ ಗಂಭೀರ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಜಾಗದ ಮಾಲಕರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.
ಕಂದಾಯ ನಿರೀಕ್ಷಕ ರವಿಕುಮಾರ್ ಲಾಯಿಲಾ ಗ್ರಾಮ ಕರಣಿಕ ಮೇಘಾನ, ನಡ ಗ್ರಾಮಕರಣಿಕ ಅಂಕಿತ್, ಗ್ರಾಮ ಸಹಾಯಕ ಸತೀಶ್, ಎಎಸ್ಐ ಆಶೋಕ್, ಎಚ್ಸಿ ರಾಜೇಶ್, ಅಶೋಕ್ ದಾಳಿಯ ಸಂದರ್ಭ ತಹಶೀಲ್ದಾರ್ ಜತೆಗಿದ್ದರು.