ಕಾಸರಗೋಡು, ಏ. 20 (DaijiworldNews/HR): ಆಟೋ ರಿಕ್ಷಾದ ಹಿಂಬದಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು ಕಲ್ಲಂಗೈಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮೃತಪಟ್ಟವರನ್ನು ಕಲ್ಲಂಗೈ ಹೊಸಮನೆಯ ಜನಾರ್ಧನ ಗಟ್ಟಿ (40) ಎಂದು ಗುರುತಿಸಲಾಗಿದೆ.
ಕಲ್ಲಂಗೈಯಲ್ಲಿರುವ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಘಟನೆ ನಡೆದಿದೆ.
ಕುಂಬಳೆ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾದ ಹಿಂಬದಿಗೆ ಇನೋವಾ ಕಾರು ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಮಗುಚಿ ಬಿದ್ದಿದ್ದು, ಆಟೋದಡಿ ಸಿಲುಕಿದ್ದ ಜನಾರ್ಧನರವರನ್ನು ಸ್ಥಳೀಯರು ಹೊರತೆಗೆದು ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಸ್ಥಿತಿ ಗಂಭೀರವಾದುದರಿಂದ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾಸರಗೋಡು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.