ಮಂಗಳೂರು, ಸೆ 18(SM): ಮದುವೆಯ ಸುವರ್ಣ ಸಂಭ್ರಮವನ್ನು ಆಚರಿಸಿದ್ದ ಮಂಗಳೂರಿನ ಬೊಂದೇಲ್ ಪಚ್ಚನಾಡಿ ನಿವಾಸಿ ಜೋಸೆಫ್(79) ಅಲ್ವಾರಿಸ್ ಸಂಭ್ರಮಾಚರಣೆಯ ಮರುದಿನ ನಿಧನ ಹೊಂದಿದ್ದಾರೆ. ಸೆಪ್ಟೆಂಬರ್ ೧೬ರ ರವಿವಾರದಂದು ಬೋಂದೆಲ್ ಚರ್ಚ್ ನಲ್ಲಿ ಸುವರ್ಣ ಸಂಭ್ರಮದ ಬಲಿಪೂಜೆಯಲ್ಲಿ ಭಾಗಿಯಾಗಿದ್ದರು. ಬಳಿಕ ಚರ್ಚ್ ಹಾಲ್ ನಲ್ಲಿ ಸಂಭ್ರಮಾಚರಣೆ ನಡೆದಿತ್ತು. ಸಂಭ್ರಮಾಚರಣೆಯಲ್ಲಿ ಖುಷಿ ಖುಷಿಯಾಗಿ ಭಾಗವಹಿಸಿದ್ದರು.
ಎಲ್ಲರೊಂದಿಗೆ ಬೆರೆತು ಸಮಾರಂಭದ ಮೆರುಗನ್ನು ಹೆಚ್ಚಿಸಿದ್ದರು. ಎಲ್ಲರೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದರು. ಸಮಾರಂಭದಲ್ಲಿ ಭಾಗವಹಿಸಿದ್ದ ತನ್ನ ಕುಟುಂಬ ಸದಸ್ಯರೊಂದಿಗೆ ಗಣ್ಯರಿಗೆ ಮನೋರಂಜನೆ ನೀಡಿದ್ದರು. ಸಮಾರಂಭದಲ್ಲಿ ಭಾಗಿಯಾಗಿ ಶುಭ ಹಾರೈಸಿದ ಬಂಧುಗಳಿಗೆ ಧನ್ಯವಾದಗಳನ್ನು ತಿಳಿಸಿದ್ದರು. ೭೯ರ ಹರೆಯದಲ್ಲಿ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದು ರಂಜಿಸಿದ್ದರು. ಸಂಭ್ರಮಾಚರಣೆ ಬಳಿಕ ಸಂತಸದಲ್ಲೇ ಮನೆಗೆ ಮರಳಿದ್ದರು.
ಮನೆಗೆ ತೆರಳಿ ದೈನಂದಿದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಗೋವುಗಳಿಗೆ ಮೇವುಣಿಸುವ ಸಂದರ್ಭದಲ್ಲಿ ಅವರಿಗೆ ಹಠಾತ್ ಹೃದಯ ನೋವು ಕಾಣಿಸಿಕೊಂಡಿದೆ. ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸೋಮವಾರ ಮೃತಪಟ್ಟಿದ್ದಾರೆ. ಇಂದು ಅವರು ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಬೊಂದೇಲ್ ಚರ್ಚ್ನಲ್ಲಿ ನೆರವೇರಿಸಲಾಯಿತು. ಇವರು ಪತ್ನಿ ಐರೀನ್, ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿ ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.
ಜೋಸೆಫ್ ಲಗ್ನದ ಸುವರ್ಣ ಸಂಭ್ರಮದ ವೀಡಿಯೋ: